ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯು ಇತ್ತೀಚೆಗೆ ಹಲವು ಸುಧಾರಣೆಗಳನ್ನು ಜಾರಿಗೆ ತರುತ್ತಿದೆ. ಟಿಕೆಟ್ ಬುಕ್ಕಿಂಗ್ ನಲ್ಲಿ ಪಾರದರ್ಶಕತೆ ಸೇರಿ ಹಲವು ಕ್ರಮಗಳನ್ನು ಜಾರಿಗೆ ತಂದಿದೆ. ಇದರ ಬೆನ್ನಲ್ಲೇ, ರೈಲ್ವೆ ಇಲಾಖೆಯು 13 ವರ್ಷಗಳ ನಿಯಮವೊಂದನ್ನು ಬದಲಾಯಿಸಿದೆ. ಹೌದು, ಇನ್ನು ಮುಂದೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ಭಾರಿ ಶಾಕ್ ಕಾದಿದೆ. ಇದುವರೆಗೆ ಇದ್ದ ಕನಿಷ್ಠ ದಂಡವನ್ನು 250 ರೂ.ಗಳಿಂದ 500 ರೂ.ಗೆ ಹೆಚ್ಚಿಸಲಾಗಿದೆ.
ಟಿಕೆಟ್ ಇಲ್ಲದವರಿಗೆ ದಂಡದ ದಂಡದ ಜತೆಗೆ ಅನ್ವಯವಾಗುವ ಪ್ರಯಾಣ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ಒಂದು ವೇಳೆ ದಂಡ ಕಟ್ಟದಿದ್ದರೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಲಿದೆ. ಅಷ್ಟೇ ಅಲ್ಲ, ಬೇರೆಯವರು ಖರೀದಿಸಿದ ಟಿಕೆಟ್ ನಲ್ಲಿ ಪ್ರಯಾಣಿಸಿದರೂ ಕನಿಷ್ಠ 500 ರೂ. ದಂಡ ವಿಧಿಸಲಾಗುತ್ತದೆ. ಅದರ ಜತೆಗೆ ಆ ಟಿಕೆಟ್ ಅನ್ನು ಜಪ್ತಿ ಮಾಡಿ, ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತದೆ.
ಮತ್ತೊಂದು ಹೊಸ ನಿಯಮ ಎಂದರೆ, ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಭಿಕ್ಷಾಟನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅನಧಿಕೃತವಾಗಿ ತಿರುಗಾಡಿ ಸಾಮಗ್ರಿ ಮಾರಾಟ ಮಾಡುವವರಿಗೆ ಮತ್ತು ಭಿಕ್ಷುಕರಿಗೆ 2 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಇದೇ ತಪ್ಪನ್ನು ಎರಡನೇ ಬಾರಿ ಮಾಡಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಹೆಣ್ಣುಮಕ್ಕಳಿಗೆ ಮೀಸಲಾದ ಕಂಪಾರ್ಟ್ ಮೆಂಟ್ ನಲ್ಲಿ ಪುರುಷರು ಪ್ರಯಾಣಿಸಿದರೆ ಅವರಿಗೆ 2,500 ರೂ. ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ರೈಲ್ವೆ ಸಿಬ್ಬಂದಿ ತಕ್ಷಣವೇ ಅವರನ್ನು ರೈಲಿನಿಂದ ಕೆಳಗೆ ಇಳಿಸುತ್ತಾರೆ. ರೈಲಿನಲ್ಲಿ ಅಥವಾ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಟ್ಟರೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾರಾದರೂ ಪ್ರಯಾಣಿಕರು ರೈಲಿನಲ್ಲಿ ಜಗಳವಾಡಿದರೆ, ಅಸಭ್ಯವಾಗಿ ಮಾತನಾಡಿದರೆ ಅಥವಾ ರೈಲ್ವೆ ಸೌಕರ್ಯಗಳಿಗೆ ಅಡ್ಡಿಪಡಿಸಿದರೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಮದ್ಯ ಅಥವಾ ಇತರ ಮಾದಕ ವಸ್ತುಗಳನ್ನು ಸೇವಿಸಿ ಗಲಾಟೆ ಮಾಡುತ್ತಿರುವುದು ಕಂಡುಬಂದರೆ, ಅವರನ್ನು ತಕ್ಷಣವೇ ರೈಲು ಮತ್ತು ನಿಲ್ದಾಣಗಳಿಂದ ಹೊರಹಾಕಲಾಗುತ್ತದೆ. ನಿಷೇಧಿತ ಅಥವಾ ಅಪಾಯಕಾರಿ ವಸ್ತುಗಳನ್ನು ರೈಲಿನಲ್ಲಿ ಸಾಗಿಸಿದರೆ ಕನಿಷ್ಠ 10 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ.



















