ಝಾನ್ಸಿ: ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ವಿಧವೆ ಪ್ರಿಯತಮೆಯಿಂದ ಬೇಸತ್ತ ಮಾಜಿ ಗ್ರಾಮ ಪ್ರಧಾನನೊಬ್ಬ, ಆಕೆಯನ್ನು ಬರ್ಬರವಾಗಿ ಹತ್ಯೆಗೈದು, ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ ಬಾವಿ ಮತ್ತು ಸೇತುವೆ ಬಳಿ ಎಸೆದಿರುವ ಘೋರ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ.
ಈ ಸಂಬಂಧ ಪೊಲೀಸರು ಮೃತ ಮಹಿಳೆಯರ ಪ್ರಿಯಕರನಾದ ಮಾಜಿ ಗ್ರಾಮ ಪ್ರಧಾನ್ ಸಂಜಯ್ ಪಟೇಲ್ ಮತ್ತು ಆತನ ಸೋದರಳಿಯ ಸಂದೀಪ್ ಪಟೇಲ್ ಎಂಬಾತನನ್ನು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ ಮತ್ತೋರ್ವ ಸಹಚರ ತಲೆಮರೆಸಿಕೊಂಡಿದ್ದಾನೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಆಗಸ್ಟ್ 13ರಂದು ಕಿಶೋರ್ಪುರ ಗ್ರಾಮದ ರೈತರೊಬ್ಬರು ತಮ್ಮ ಹೊಲಕ್ಕೆ ಹೋದಾಗ ಬಾವಿಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಬಾವಿಯೊಳಗೆ ಇಣುಕಿ ನೋಡಿದಾಗ, ಎರಡು ಚೀಲಗಳು ತೇಲುತ್ತಿರುವುದು ಕಂಡುಬಂದಿದೆ. ಅನುಮಾನಗೊಂಡು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಚೀಲಗಳನ್ನು ಹೊರತೆಗೆದು ನೋಡಿದಾಗ ಮಹಿಳೆಯ ದೇಹದ ತುಂಡರಿಸಿದ ಭಾಗಗಳು ಅದರಲ್ಲಿ ಪತ್ತೆಯಾಗಿವೆ.
ಪೊಲೀಸರ ಬಿರುಸಿನ ತನಿಖೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಝಾನ್ಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP), ಪ್ರಕರಣ ಬೇಧಿಸಲು ಎಂಟು ವಿಶೇಷ ತನಿಖಾ ತಂಡಗಳನ್ನು ರಚಿಸಿದರು. ಆಗಸ್ಟ್ 17 ರಂದು, ಬಾವಿಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದಾಗ ಮೃತ ದೇಹದ ಕೈಗಳು ಪತ್ತೆಯಾದವು. ಆದರೆ, ತಲೆ ಮತ್ತು ಕಾಲುಗಳು ನಾಪತ್ತೆಯಾಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಸವಾಲಾಗಿತ್ತು.
ಪೊಲೀಸರು 100ಕ್ಕೂ ಹೆಚ್ಚು ಗ್ರಾಮಸ್ಥರನ್ನು ವಿಚಾರಣೆ ನಡೆಸಿದ್ದು, 200ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಮೃತರ ಗುರುತು ಪತ್ತೆಗಾಗಿ ಸಾವಿರಾರು ಪೋಸ್ಟರ್‌ಗಳನ್ನು ಕೂಡ ಮುದ್ರಿಸಿ ಹಂಚಿದ್ದಾರೆ.
ಪೋಸ್ಟರ್‌ನಿಂದ ಸಿಕ್ಕ ಸುಳಿವು
ಪೊಲೀಸರ ಪ್ರಯತ್ನವು ಫಲ ನೀಡಿ, ಪೋಸ್ಟರ್ ನೋಡಿದ ವ್ಯಕ್ತಿಯೊಬ್ಬರು ಮೃತ ಮಹಿಳೆ ತನ್ನ ಸಹೋದರಿ ಎಂದು ಗುರುತಿಸಿದ್ದಾರೆ. ಹೀಗಾಗಿ ಮೃತ ಮಹಿಳೆಯನ್ನು ಝಾನ್ಸಿಯಿಂದ ಎರಡು ಗಂಟೆಗಳ ದೂರದಲ್ಲಿರುವ ಟಿಕಾಮ್‌ಗಢದ ವಿಧವೆ ರಚನಾ ಯಾದವ್ ಎಂಬುದು ದೃಢಪಟ್ಟಿತು. ರಚನಾ ಅವರು ಒಂದು ಕಾನೂನು ಹೋರಾಟ ನಡೆಸುತ್ತಿದ್ದು, ಅದಕ್ಕೆ ಮಾಜಿ ಪ್ರಧಾನ್ ಸಂಜಯ್ ಪಟೇಲ್ ಸಹಾಯ ಮಾಡಿದ್ದ. ಈ ಸಮಯದಲ್ಲಿ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು. ವಿಧವೆಯಾಗಿದ್ದ ರಚನಾ ಅವರು ಇದಾದ ಬಳಿಕ ತನ್ನನ್ನು ಮದುವೆಯಾಗುವಂತೆ ಸಂಜಯ್ ಪಟೇಲ್ ಮೇಲೆ ತೀವ್ರ ಒತ್ತಡ ಹೇರಲಾರಂಭಿಸಿದ್ದರು. ಇದರಿಂದ ಬೇಸತ್ತ ಸಂಜಯ್, ತನ್ನ ಸೋದರಳಿಯ ಮತ್ತು ಸ್ನೇಹಿತನೊಂದಿಗೆ ಸೇರಿ ಆಕೆಯನ್ನು ಮುಗಿಸಲು ಸಂಚು ರೂಪಿಸಿದ್ದ.
ಪೊಲೀಸರ ಪ್ರಕಾರ, ಆಗಸ್ಟ್ 8ರಂದು ಆರೋಪಿಗಳು ರಚನಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ, ಆಕೆಯ ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ, ಚೀಲಗಳಲ್ಲಿ ತುಂಬಿ ಬೇರೆ ಬೇರೆ ಕಡೆ ಎಸೆದಿದ್ದಾರೆ.
“ಗುರುವಾರ, ತೊಡಿಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಲಖೇರಿ ನದಿಯಿಂದ ಮಹಿಳೆಯ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ತನಿಖಾ ತಂಡಕ್ಕೆ 50,000 ರೂ. ಬಹುಮಾನ ಘೋಷಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಪ್ರದೀಪ್ ಅಹಿರ್ವಾರ್ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ಘೋಷಿಸಲಾಗಿದೆ,” ಎಂದು ಎಸ್ಎಸ್ಪಿ ತಿಳಿಸಿದ್ದಾರೆ.