ಉಡುಪಿ : ನವೆಂಬರ್ 28ಕ್ಕೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಐತಿಹಾಸಿಕ ಲಕ್ಷ ಕಂಠ ಗೀತಾ ಆಯೋಜನೆ ಹಾಗೂ ಪ್ರಧಾನ ಮಂತ್ರಿ ಮೋದಿ ಭೇಟಿಯ ಪೂರ್ವ ತಯಾರಿಗಳ ಬಗ್ಗೆ ಉಡುಪಿ ಶ್ರೀಕೃಷ್ಣ ಮಠದ ಗೀತಾ ಮಂದಿರದಲ್ಲಿ ಪರ್ಯಾಯ ಶ್ರೀಪಾದರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತಿಗೆ ಪರ್ಯಾಯ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಅವರು ಮಾತನಾಡಿ, “ತಮ್ಮ ಕಳೆದ ಪರ್ಯಾಯದಲ್ಲಿ ಗುಜರಾತಿನ ಮುಖ್ಯಮಂತ್ರಿಗಳಾಗಿ ಆಗಮಿಸಿದ್ದ ನರೇಂದ್ರ ಮೋದಿ ಈ ಬಾರಿ ನಮ್ಮ ಪರ್ಯಾಯದಲ್ಲಿಯೇ ಪ್ರಧಾನಮಂತ್ರಿಗಳಾಗಿ ಆಗಮಿಸುತ್ತಿದ್ದು, ಉಡುಪಿಯ ಸಭ್ಯತೆ, ಸಂಸ್ಕೃತಿ, ಆತಿಥ್ಯಗಳ ವಿಶೇಷತೆಗಳು ಸರ್ವರಿಗೂ ತಿಳಿಯುವಂತೆ ಕಾರ್ಯಕ್ರಮ ಆಯೋಜನೆಯಾಗಬೇಕಿದೆ. ಪ್ರಧಾನಮಂತ್ರಿಗಳ ಸುರಕ್ಷತೆಗೂ ಸಂಪೂರ್ಣ ಆದ್ಯತೆ ನೀಡಬೇಕಾಗಿದೆ. ಒಂದು ತಿಂಗಳ ಪರ್ಯಂತವಾಗಿ ನಡೆಯುವ ಗೀತೋತ್ಸವದಲ್ಲಿ ಸಂತ ಸಂಗಮ, ಗೀತಾ ಮಹಾಯಾಗ, ಅಂತರರಾಷ್ಟ್ರೀಯ ಗೀತಾ ಸಮ್ಮೇಳನ ನಡೆಯಲಿದ್ದು, ಈ ಕಾರ್ಯಕ್ರಮಗಳಿಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ಕೇಂದ್ರ ಸಚಿವರು ಹಾಗೂ ವಿಶ್ವದ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಇದು ಸಮಗ್ರ ಉಡುಪಿಗೆ ಗೌರವ ತರುವ ಐತಿಹಾಸಿಕ ಕಾರ್ಯಕ್ರಮವಾಗಲಿದ್ದು, ಎಲ್ಲರೂ ಇದರ ಯಶಸ್ಸಿಗೆ ಕೈಜೋಡಿಸಬೇಕು” ಎಂದು ಹೇಳಿದ್ದಾರೆ.
ಇನ್ನು, ಈ ಸಭೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸುಪ್ರಸಾದ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಸಹಾಯಕ ಆಯುಕ್ತರಾದ ರಶ್ಮಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ : ನ.5 ರಂದು ಪ್ರಧಾನಿ ಮೋದಿ ವಿಶ್ವಕಪ್ ಚಾಂಪಿಯನ್ ಮಹಿಳಾ ತಂಡವನ್ನು ಭೇಟಿ ಸಾಧ್ಯತೆ!



















