ಬೆಂಗಳೂರು: ಕೇಂದ್ರ ಸರ್ಕಾರದ ಬೆಂಬಲ ಇರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಯೋಜನೆಯು ಹೂಡಿಕೆಗೆ ಉತ್ತಮವಾಗಿದೆ. ಸುರಕ್ಷಿತ ಹೂಡಿಕೆಗೆ ಇದು ಉತ್ತಮ ಆಯ್ಕೆಯಾಗಿದೆ. ಯಾವುದೇ ಬ್ಯಾಂಕ್ ಇಲ್ಲವೇ ಅಂಚೆ ಕಚೇರಿಯಲ್ಲಿ ಹೂಡಿಕೆ ಆರಂಭಿಸಬಹುದು. ಇದರ ಬೆನ್ನಲ್ಲೇ, ಇತ್ತೀಚೆಗೆ ಪಿಪಿಎಫ್ ಸಾಲಕ್ಕೆ ಬಡ್ಡಿ ದರವನ್ನು ಇಳಿಸಲಾಗಿದೆ. ವೈಯಕ್ತಿಕ ಸಾಲ ಪಡೆದರೆ ಬ್ಯಾಂಕುಗಳು ಹೆಚ್ಚಿನ ಬಡ್ಡಿ ವಿಧಿಸುವ ಕಾರಣ ಪಿಪಿಎಫ್ ಹೂಡಿಕೆಯಿಂದ ಸಾಲ ಪಡೆಯಬಹುದು. ಈಗ ಎಷ್ಟು ಬಡ್ಡಿದರ ಇದೆ ಎಂಬುದರ ಮಾಹಿತಿ ಇಲ್ಲಿದೆ.
ಪಿಪಿಎಫ್ ಮೊತ್ತದಲ್ಲಿ ಪಡೆಯುವ ಸಾಲಕ್ಕೆ ಬಡ್ಡಿ ಕಡಿಮೆ ಇರುತ್ತದೆ. ಪಿಪಿಎಫ್ ನಲ್ಲಿನ ಠೇವಣಿಗೆ ಸರಕಾರ ನೀಡುವ ಬಡ್ಡಿಗಿಂತ ಶೇ. 2ರಷ್ಟು ಹೆಚ್ಚು ಇರುತ್ತದೆ. ಬಡ್ಡಿಯು ಸಾಲಕ್ಕೆ ಅನ್ವಯವಾಗುತ್ತದೆ. ಅಂದರೆ, ಪ್ರಸಕ್ತ ಪಿಪಿಎಫ್ ಠೇವಣಿ ದರ ಶೇ. 7.1 ಇದೆ. ನೀವು ಸಾಲ ಪಡೆದರೆ ಬಡ್ಡಿ ಶೇ. 9.1 ಆಗುತ್ತದೆ. ಈಗ ಸರಕಾರ ಈ ಹೆಚ್ಚುವರಿ ಬಡ್ಡಿಯನ್ನು ಶೇ. 2ರಿಂದ ಶೇ. 1ಕ್ಕೆ ಇಳಿಸಿದೆ. ಅಂದರೆ, ಶೇ. 9.1 ಬಡ್ಡಿ ಬದಲು ಶೇ. 8.1 ಬಡ್ಡಿ ಮಾತ್ರವೇ ಅನ್ವಯ ಆಗುತ್ತದೆ.
ಎಲ್ಐಸಿ, ಎಫ್ ಡಿ ಇತ್ಯಾದಿಗಳಲ್ಲಿಪಿಪಿಎಫ್ ನಲ್ಲಿಹೂಡಿಕೆ ಆಧಾರದ ಮೇಲೆ ಸಾಲ ಪಡೆಯುವ ಅವಕಾಶ ಸಿಗುತ್ತದೆ. ಹೂಡಿಕೆ 5 ಲಕ್ಷ ರೂ. ಇದ್ದರೆ ಅಷ್ಟೂ ಮೊತ್ತ ಸಾಲವಾಗಿ ಸಿಗುವುದಿಲ್ಲ. ಸಾಲಕ್ಕೆ ಅರ್ಜಿ ಸಲ್ಲಿಸಿದಾಗ 2 ವರ್ಷಗಳ ಹಿಂದೆ ನಿಮ್ಮ ಪಿಪಿಎಫ್ ಖಾತೆಯಲ್ಲಿಎಷ್ಟು ಬಾಕಿ ಇರುತ್ತದೆಯೋ ಅದರಲ್ಲಿಶೇ.25ರಷ್ಟು ಮಾತ್ರ ಸಾಲ ಪಡೆಯಬಹುದಾಗಿದೆ.
ಹೂಡಿಕೆ ದೃಷ್ಟಿಯಿಂದ ಯೋಚಿಸುವುದಾದರೆ, ಪಿಪಿಎಫ್ ಖಾತೆಗೆ ಒಂದು ವರ್ಷದಲ್ಲಿಒಂದೂವರೆ ಲಕ್ಷ ರೂ. ತನಕ ಹಣ ಹೂಡಕೆ ಮಾಡಬಹುದು. ಇದು ಜನಸಾಮಾನ್ಯರಿಗೆ ಅತ್ಯಂತ ಸುರಕ್ಷಿತ ಹೂಡಿಕೆಯಾಗಿದೆ. ಇದು ತೆರಿಗೆ ಉಳಿಸಬಲ್ಲುದು, ಬಡ್ಡಿ ಆದಾಯ ತಂದುಕೊಡಬಲ್ಲುವುದು. ದೀರ್ಘಾವಧಿ ಹೂಡಿಕೆಯಾಗಿರುವ ಇದು ಸರಕಾರದ ಸುಪರ್ದಿಯಲ್ಲಿ ಇರುವುದರಿಂದ ಹಣಕ್ಕೆ ಖಾತ್ರಿ ಇರುತ್ತದೆ. ಕೇಂದ್ರ ಸರಕಾರ ಪ್ರತಿ 3 ತಿಂಗಳಿಗೊಮ್ಮೆ ಪಿಪಿಎಫ್ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ.
ಗಮನಿಸಿ: ಮಾಹಿತಿ ದೃಷ್ಟಿಯಿಂದ ಮಾತ್ರ ಪಿಪಿಎಫ್ ಸಾಲದ ಕುರಿತು ಲೇಖನ ಪ್ರಕಟಿಸಲಾಗಿದೆ. ಇದು ಸಾಲ ಪಡೆಯಲು ಮಾಡುತ್ತಿರುವ ಶಿಫಾರಸು ಅಲ್ಲ, ಯಾವುದೇ ಹೂಡಿಕೆ, ಸಾಲ ಮಾಡುವಾಗ ತಜ್ಞರ ಸಲಹೆ-ಸೂಚನೆ ಪಡೆಯುವುದು, ಅಗತ್ಯ ದಾಖಲೆಗಳನ್ನು ಓದುವುದು ಅತ್ಯವಶ್ಯಕ.



















