ಬೆಂಗಳೂರು: ಅಮೆರಿಕದ ಸುಂಕದ ಸಮರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಹಿಂಪಡೆಯುವ ಕಾರಣ ಷೇರು ಮಾರುಕಟ್ಟೆಯಲ್ಲಿ ಚಂಚಲತೆ ಇದೆ. ಹಾಗಾಗಿ, ಷೇರು ಪೇಟೆಯಲ್ಲಿ ಹೂಡಿಕೆದಾರರು ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಇನ್ನು ರೆಪೊ ದರ ಇಳಿಕೆ ಮಾಡಿರುವ ಕಾರಣ ಬ್ಯಾಂಕುಗಳು ಎಫ್ ಡಿ ಸೇರಿ ಹಲವು ಯೋಜನೆಗಳ ಮೇಲಿನ ಬಡ್ಡಿಯನ್ನು ಇಳಿಕೆ ಮಾಡಿವೆ. ಇಂತಹ ಸಂದರ್ಭದಲ್ಲಿ ಎಲ್ಲಿ ಹೂಡಿಕೆ ಮಾಡಬೇಕು ಎಂಬ ಯೋಚನೆ ಕಾಡುತ್ತಿದೆಯೇ? ಹಾಗಾದರೆ, ಚಿಂತೆ ಬೇಡ. ಹೆಚ್ಚು ರಿಟರ್ನ್ಸ್ ನೀಡುವ ಪೋಸ್ಟ್ ಆಫೀಸ್ ಯೋಜನೆ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.
ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಹಾಗೂ ಖಾಸಗಿ ಬ್ಯಾಂಕ್ ಗಳಲ್ಲಿ ನಿಶ್ಚಿತ ಠೇವಣಿ ಅಥವಾ ಎಫ್ ಡಿ ಇರುವಂತೆಯೇ, ಪೋಸ್ಟ್ ಆಫೀಸ್ ನಲ್ಲಿ ಟೈಮ್ ಡೆಪಾಸಿಟ್ ಅಥವಾ ಟಿಡಿ ಇರುತ್ತದೆ. ಈ ಯೋಜನೆಯಲ್ಲಿ ನೀವು 5 ಲಕ್ಷ ರೂಪಾಯಿಯನ್ನು 10 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನಿಮಗೆ 10 ಲಕ್ಷ ರೂಪಾಯಿ ರಿಟರ್ನ್ಸ್ ಸಿಗುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವ ಕಾರಣ ಸುರಕ್ಷಿತವೂ ಆಗಿದೆ.
ಪೋಸ್ಟ್ ಆಫೀಸ್ ನಲ್ಲಿ, 1, 2, 3 ಹಾಗೂ 5 ವರ್ಷಗಳವರೆಗೆ ಟಿಡಿ ಇರಿಸಬಹುದು. ಹಾಗೊಂದು ವೇಳೆ, ನೀವು ಐದು ಲಕ್ಷ ರೂಪಾಯಿಯನ್ನು ಐದು ವರ್ಷಕ್ಕೆ ಠೇವಣಿ ಇಟ್ಟಾಗ, ಅದು ಮೆಚ್ಯೂರಿಟಿಗೆ ಬಂದಾಗ 7.21 ಲಕ್ಷ ರೂ ಆಗುತ್ತದೆ. ಅಷ್ಟೂ ಹಣವನ್ನು ನೀವು ಮತ್ತೆ 5 ವರ್ಷಗಳವರೆಗೆ ಹೂಡಿಕೆ ಮಾಡಿದಾಗ ಐದು ವರ್ಷದಲ್ಲಿ 10.40 ಲಕ್ಷ ರೂ ಆಗುತ್ತದೆ. ಅಂದರೆ ನಿಮ್ಮ ಐದು ಲಕ್ಷ ರೂ ಹಣವು ಹತ್ತು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಾಗಿರುತ್ತದೆ. ಇದನ್ನೇ ಕಾಂಪೌಂಡಿಂಗ್ ಲಾಭ ಎಂದು ಕರೆಯುತ್ತಾರೆ.
ಪೋಸ್ಟ್ ಆಫೀಸಿನಲ್ಲಿ ಹೂಡಿಕೆಯ ಅವಧಿಗೆ ತಕ್ಕಂತೆ ಬಡ್ಡಿ ನಿಗದಿಪಡಿಸಲಾಗಿರುತ್ತದೆ. ಒಂದು ವರ್ಷದ ಠೇವಣಿಗೆ ಶೇ 6.9 ಬಡ್ಡಿ ನೀಡಲಾಗುತ್ತದೆ. 2 ವರ್ಷ ಹೂಡಿಕೆ ಮಾಡಿದರೆ ಶೇ.7, 3 ವರ್ಷದ ಹೂಡಿಕೆಗೆ ಶೇ.7.1 ಹಾಗೂ 5 ವರ್ಷದ ಹೂಡಿಕೆಗೆ ಶೇ.7.5ರಷ್ಟು ಬಡ್ಡಿ ಸಿಗುತ್ತದೆ.