ಉಡುಪಿ : ಶ್ರೀ ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ಮೋದಿ ನವೆಂಬರ್ 28ರಂದು ಉಡುಪಿಗೆ ಆಗಮಿಸುತ್ತಿದ್ದಾರೆ. ಬೆಳಿಗ್ಗೆ 11.05ಕ್ಕೆ ದೆಹಲಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದು, ತಕ್ಷಣವೇ 11.10ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿದ್ದಾರೆ. ಅವರು ಬೆಳಿಗ್ಗೆ 11.35ಕ್ಕೆ ಆದಿ ಉಡುಪಿಯ ಹೆಲಿಪ್ಯಾಡ್ ತಲುಪಲಿದ್ದಾರೆ.
ಪ್ರಧಾನಿ ಮೋದಿ ಅವರು ಕೃಷ್ಣ ಮಠದ ಸುವರ್ಣ ಮುಖಮಂಟಪ ಮತ್ತು ಕನಕನ ಕಿಂಡಿಯ ಸ್ವರ್ಣ ಕವಚವನ್ನು ಲೋಕಾರ್ಪಣೆಗೊಳಿಸಲಿದ್ದು, ಬಳಿಕ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ತದನಂತರ ಲಕ್ಷಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಭಗವದ್ಗೀತೆಯ 10 ಶ್ಲೋಕಗಳನ್ನು ಕೂಡ ಅವರು ಪಠಿಸಲಿದ್ದಾರೆ. ಈ ಧಾರ್ಮಿಕ ಉತ್ಸವದಲ್ಲಿ ಸುಮಾರು ಒಂದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ಕ್ಕೆ ಭೇಟಿ ನೀಡಲಿರುವ ಕಾರಣ ವಿವಿಧ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಆದೇಶ ಹೊರಡಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 163 ಅನ್ವಯ ಈ ಆದೇಶ ಜಾರಿಗೊಳಿಸಲಾಗಿದೆ. ಪ್ರಧಾನಿಗಳ ಸಂಚಾರ ಮತ್ತು ಭೇಟಿ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ ಹಾಗೂ ಪ್ರವಾಸಿ ಮಂದಿರದ ಸುತ್ತಮುತ್ತ ಇರುವ ಅಂಗಡಿ–ಮುಂಗಟ್ಟುಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಲಾಗಿದೆ. ಇದೇ ರೀತಿ ಪ್ರಧಾನಿ ಸಂಚರಿಸುವ ಮಾರ್ಗದ ಎರಡೂ ಬದಿಯಲ್ಲಿರುವ ಅಂಗಡಿಗಳನ್ನೂ ನವೆಂಬರ್ 28ರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುಚ್ಚುವಂತೆ ಜಿಲ್ಲಾಡಳಿತ ನಿರ್ದೇಶಿಸಿದೆ.
ಡ್ರೋನ್ ಹಾರಾಟ ನಿಷೇಧ
ನವೆಂಬರ್ 26 ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ‘ನೋ ಫ್ಲೈ ಜೋನ್’ ಎಂದು ಘೋಷಿಸಲಾಗಿದೆ.
ಸಾರ್ವಜನಿಕರಿಗೆ ಏನೇನು ನಿರ್ಬಂಧ?
ಪ್ರಧಾನಿಯ ವೀಕ್ಷಣೆಗೆ ಬರುವ ಸಾರ್ವಜನಿಕರು ಬ್ಯಾಗ್, ನೀರಿನ ಬಾಟಲ್, ಧ್ವಜ, ಸ್ಟಿಕರ್, ಬಲೂನು, ಪಟಾಕಿ, ಲೂಸ್ ಪಾಲಿಥಿನ್ ವಸ್ತುಗಳನ್ನು ತರದಂತೆ ಸೂಚಿಸಲಾಗಿದೆ. ಆದೇಶ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಕಾರ್ಯಕ್ರಮ ಪಟ್ಟಿ ಹೀಗಿದೆ :
ಬೆಳಗ್ಗೆ 8.15: ದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಮಾನದಲ್ಲಿ ಪಯಣ.
ಬೆಳಗ್ಗೆ 11.05: ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.
ಬೆಳಗ್ಗೆ 11.10: ಹೆಲಿಕಾಪ್ಟರ್ ಮೂಲಕ ಪಯಣ.
ಬೆಳಗ್ಗೆ 11.35: ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮನ.
ಬೆಳಗ್ಗೆ 11.45: ಆದಿ ಉಡುಪಿ ಹೆಲಿಪ್ಯಾಡ್‌ನಿಂದ ರಸ್ತೆ ಪಯಣ.
ಮಧ್ಯಾಹ್ನ 12: ಶ್ರೀಕೃಷ್ಣ ಮಠ ಭೇಟಿ, ದೇವರ ದರ್ಶನ, ಲಕ್ಷ ಕಂಠ ಗೀತಾ ಪಾರಾಯಣ ಸಮಾರಂಭದಲ್ಲಿ ಭಾಗಿ.
ಮಧ್ಯಾಹ್ನ 12ರಿಂದ 1.30: ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಶ್ರೀ ಭೇಟಿ.
ಮಧ್ಯಾಹ್ನ 1.35: ಶ್ರೀಕೃಷ್ಣಮಠದಿಂದ ನಿರ್ಗಮನ.
ಮಧ್ಯಾಹ್ನ 1.45: ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣ.
2.15: ವಾಯುಪಡೆ ವಿಮಾನ ಮೂಲಕ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ ಪಯಣ.
3.05: ದಾಬೋಲಿಮ್ ವಿಮಾನ ನಿಲ್ದಾಣದಿಂದ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ.
ಇದನ್ನೂ ಓದಿ : ಹುಟ್ಟೂರು ರಾಮದುರ್ಗದಲ್ಲಿ ಇಂದು IAS ಅಧಿಕಾರಿ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ



















