ಪಾಟ್ನಾ: ಬಿಹಾರದ ಮಧುಬನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Modi in Bihar)ಯವರು 13,480 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಗುರುವಾರ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿದ್ದಾರೆ. ಬಳಿಕ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು, ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮಡಿದ ನಾಗರಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಭಾಷಣ ಆರಂಭಿಸುವುದಕ್ಕೂ ಮುನ್ನ ಅವರು, ದಾಳಿಯಲ್ಲಿ ಹತರಾದವರಿಗಾಗಿ ಒಂದು ನಿಮಿಷ ಮೌನಾಚರಣೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅದರಂತೆ, ಇಡೀ ಸಭಾಂಗಣದಲ್ಲಿ ಸೇರಿದ್ದ ಎಲ್ಲರೂ ಎದ್ದುನಿಂತು ಪ್ರಧಾನಿ ಮೋದಿಯವರೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದು ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ನಡೆಯುತ್ತಿರುವ ಪ್ರಧಾನಿ ಮೋದಿಯವರ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿದೆ. ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ಪಹಲ್ಗಾಮ್‌ನಲ್ಲಿ ಉಗ್ರವಾದಿಗಳು ಅಮಾಯಕ ದೇಶವಾಸಿಗಳನ್ನು ಕೊಂದುಹಾಕಿದ್ದಾರೆ. ಇದು ಇಡೀ ದೇಶಕ್ಕೆ ಆಘಾತ ತಂದಿದೆ. ಭಯೋತ್ಪಾದಕರು ಯಾರದ್ದೋ ಮಗನನ್ನು, ಯಾರದ್ದೋ ತಂದೆಯನ್ನು, ಯಾರದ್ದೋ ಗಂಡನನ್ನು ಹತ್ಯೆಗೈದರು. ಮೃತರಲ್ಲಿ ಒಬ್ಬರು ಮರಾಠಿಗ, ಮತ್ತೊಬ್ಬ ಕನ್ನಡಿಗ, ಬಂಗಾಳಿಗ, ಗುಜರಾತಿಗ, ಬಿಹಾರದವ ಹೀಗೆ ಬೇರೆ ಬೇರೆ ರಾಜ್ಯದವರಿದ್ದರು. ಇವರೆಲ್ಲರ ಸಾವಿನ ವಿಷಯದಲ್ಲೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲರ ಆಕ್ರೋಶವೂ ಒಂದೇ ಆಗಿದೆ. ನಾನು ಹೇಳುವುದೊಂದೇ- ಈ ದಾಳಿ ನಡೆಸಿದವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಆತಂಕವಾದಿಗಳಿಗೆ ಅವರು ಊಹಿಸಲೂ ಸಾಧ್ಯವಾಗದಂಥ ಪ್ರತ್ಯುತ್ತರ ನೀಡುತ್ತೇವೆ” ಎಂದು ಶಪಥಗೈದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದಲ್ಲದೆ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಒಗ್ಗಟ್ಟಾಗಿ ನಿಂತಿದೆ ಎಂದು ಹೇಳಿದರು.
ಕಾಂಗ್ರೆಸ್, ಆರ್‌ಜೆಡಿ ಟೀಕೆ:
ಇದೇ ವೇಳೆ, ಪಹಲ್ಗಾಮ್ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿ ಮರುಗುತ್ತಿರುವ ಹೊತ್ತಲ್ಲೇ ಪ್ರಧಾನಿ ಮೋದಿಯವರು ಬಿಹಾರ ಪ್ರವಾಸ ಕೈಗೊಂಡಿರುವ ಬಗ್ಗೆ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಆರ್‌ಜೆಡಿ ಆಕ್ರೋಶ ವ್ಯಕ್ತಪಡಿಸಿವೆ. “ದಾಳಿಯ ಸುದ್ದಿ ಕೇಳುತ್ತಲೇ ರಾಹುಲ್ ಗಾಂಧಿಯವರು ತಮ್ಮ ಅಮೆರಿಕ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸಾಗಿದ್ದಾರೆ. ಆದರೆ, ಮೋದಿಯವರು ಬಿಹಾರದಲ್ಲಿ ಚುನಾವಣಾ ರಾಲಿ ನಡೆಸುತ್ತಿದ್ದಾರೆ. ಇಡೀ ದೇಶ ಶೋಕದಲ್ಲಿದೆ, ಮೋದಿ ಮಾತ್ರ ಪ್ರಚಾರದಲ್ಲಿದ್ದಾರೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
“ಪಹಲ್ಗಾಮ್ ದಾಳಿಗೆ ಬಲಿಯಾದವರ ಚಿತೆಗೆ ಇನ್ನೂ ಅಗ್ನಿಸ್ಪರ್ಶವೇ ಆಗಿಲ್ಲ. ಆದರೆ ಮೋದಿಯವರು ಅಷ್ಟರಲ್ಲೇ ಬಿಹಾರಕ್ಕೆ ಬಂದು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಬಿಹಾರದ ನಿತೀಶ್ ಸರ್ಕಾರವು ಬಿಡಿಒಗಳು, ಡಿಟಿಒಗಳು, ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದು ಮೋದಿ ಕಾರ್ಯಕ್ರಮಕ್ಕೆ ಜನ ಸೇರಿಸುವಂತೆ ಒತ್ತಡ ಹೇರುತ್ತಿದೆ. ಪಂಚರು, ಸರಪಂಚರು, ವಾರ್ಡ್ ಸದಸ್ಯರು, ಕಮಿಟಿ ಸದಸ್ಯರಿಗೆ ಬೆದರಿಕೆ ಹಾಕಿ ಮಧುಬನಿಗೆ ಹೋಗುವಂತೆ ಸೂಚಿಸಲಾಗುತ್ತಿದೆ. ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ” ಎಂದು ಆರ್‌ಜೆಡಿ ಆರೋಪಿಸಿದೆ.



















