ಬೆಂಗಳೂರು: ದೇಶದ ಖಾಸಗಿ ಕಂಪನಿಗಳ ಕೋಟ್ಯಂತರ ಉದ್ಯೋಗಿಗಳಿಗೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ. ಹೌದು, ಪಿಎಫ್ ಕನಿಷ್ಠ ಸಂಬಳದ ಮಿತಿಯನ್ನು ಕೇಂದ್ರ ಸರ್ಕಾರವು 15 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲಿಗೆ, ಗರಿಷ್ಠ 25 ಸಾವಿರ ರೂಪಾಯಿವರೆಗೆ ಸಂಬಳ ಹೊಂದಿರುವವರಿಗೆ ಕಡ್ಡಾಯವಾಗಿ ಪಿಎಫ್ ಸೌಲಭ್ಯವು ದೊರೆಯಲಿದೆ. ಇದರಿಂದಾಗಿ ಕೋಟ್ಯಂತರ ಉದ್ಯೋಗಿಗಳು ಅನುಕೂಲ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಈಗ ತಿಂಗಳಿಗೆ 15 ಸಾವಿರ ರೂಪಾಯಿವರೆಗೆ ಮೂಲ ವೇತನ (ಭತ್ಯೆ ಸೇರಿ) ಇರುವವರಿಗೆ ಕಂಪನಿಗಳು ಪಿಎಫ್ ನೀಡುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರವು ಈ ಮಿತಿಯನ್ನು ನಿಗದಿಪಡಿಸಿ 10 ವರ್ಷವಾಗಿದೆ. ಸರ್ಕಾರವು 2014ರಲ್ಲಿ 6,500 ರೂ. ಇದ್ದ ಮಿತಿಯನ್ನು 15 ಸಾವಿರ ರೂಪಾಯಿಗೆ ಏರಿಕೆ ಮಾಡಿತ್ತು. ಈಗ ಮತ್ತೆ ಮಿತಿಯಲ್ಲಿ 10 ಸಾವಿರ ರೂಪಾಯಿ ಏರಿಕೆ ಮಾಡಲಿದೆ ಎಂದು ತಿಳಿದುಬಂದಿದೆ.
ಇಪಿಎಫ್ಒ ಸಭೆಯು 2026ರ ಆರಂಭದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಪಿಎಫ್ ಸಂಬಳದ ಮಿತಿಯನ್ನು 25 ಸಾವಿರ ರೂಪಾಯಿಗೆ ಏರಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸರ್ಕಾರವೇನಾದರೂ ಈ ತೀರ್ಮಾನ ತೆಗೆದುಕೊಂಡರೆ, ಸುಮಾರು ಒಂದು ಕೋಟಿ ಉದ್ಯೋಗಿಗಳಿಗೆ ಪಿಎಫ್ ಸೌಲಭ್ಯ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಎಂ. ನಗರಾಜು ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವೇತನ ಮಿತಿ ಏರಿಕೆ ಒಂದು ಮಹತ್ವದ ವಿಷಯವಾಗಿದೆ. ತಿಂಗಳಿಗೆ 15 ಸಾವಿರ ರೂ.ಗಿಂತ ಹೆಚ್ಚು ಸಂಬಳ ಪಡೆಯುವ ನೌಕರರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದು, ಅವರ ಕಡೆಗಾಲದಲ್ಲಿ ಆರ್ಥಿಕ ಸಹಾಯವಿಲ್ಲದೆ ಅವರ ಬದುಕು ದುಸ್ತಿರವಾಗಿರುತ್ತದೆ. ಹಾಗಾಗಿ ಇಂದಿನ ಆದಾಯ ಮಟ್ಟಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ 3 ಹುದ್ದೆಗಳ ನೇಮಕ : 2.15 ಲಕ್ಷ ರೂ. ಸ್ಯಾಲರಿ



















