ಮುಂಬೈ: ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದ ಖ್ಯಾತ ಗಾಯಕ ಮತ್ತು ಚಲನಚಿತ್ರ ನಿರ್ದೇಶಕ ಪಲಾಶ್ ಮುಚ್ಚಲ್ ಅವರು ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಅವರೊಂದಿಗಿನ ಮದುವೆ ರದ್ದಾದ ಬೆನ್ನಲ್ಲೇ, ಪಲಾಶ್ ವಿರುದ್ಧ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿದೆ.
ಚಲನಚಿತ್ರ ಹೂಡಿಕೆಯ ಹೆಸರಿನಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರಿಗೆ 40 ಲಕ್ಷ ರೂಪಾಯಿ ವಂಚಿಸಿದ ಆರೋಪ ಪಲಾಶ್ ಅವರ ಮೇಲೆ ಕೇಳಿಬಂದಿದೆ. ಸಾಂಗ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬುಧವಾರ ಸಂಜೆ ಈ ಕುರಿತು ಅಧಿಕೃತ ದೂರು ಸಲ್ಲಿಕೆಯಾಗಿದೆ.
ಸಿನಿಮಾ ಹೂಡಿಕೆಯ ಹೆಸರಿನಲ್ಲಿ ನಡೆದ ವ್ಯವಹಾರ
ಈ ದೂರಿಗೂ ಸ್ಮೃತಿ ಮಂಧಾನ ಅವರ ಕುಟುಂಬಕ್ಕೂ ನಂಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ದೂರುದಾರ ವೈಭವ್ ಮಾನೆ ಅವರು ಸ್ಮೃತಿ ಮಂಧಾನ ಅವರ ಬಾಲ್ಯದ ಸ್ನೇಹಿತ ಮತ್ತು ಸಿನಿಮಾ ಹಣಕಾಸು ವ್ಯವಹಾರ ನಡೆಸುವವರಾಗಿದ್ದಾರೆ. ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ಪಲಾಶ್ ಮುಚ್ಚಲ್ ಸಾಂಗ್ಲಿಗೆ ಭೇಟಿ ನೀಡಿದ್ದಾಗ ವೈಭವ್ ಅವರನ್ನು ಪಲಾಶ್‌ಗೆ ಪರಿಚಯಿಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪಲಾಶ್ ಅವರು ‘ನಜರಿಯಾ’ ಎಂಬ ಹೆಸರಿನ ಚಿತ್ರದ ಬಗ್ಗೆ ಪ್ರಸ್ತಾಪಿಸಿ, ಅದರಲ್ಲಿ ಹೂಡಿಕೆ ಮಾಡುವಂತೆ ವೈಭವ್ ಅವರನ್ನು ಕೇಳಿಕೊಂಡಿದ್ದರು. ಚಿತ್ರವು ಶೀಘ್ರದಲ್ಲೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ ಮತ್ತು ಹೂಡಿಕೆ ಮಾಡಿದ ಹಣ ಶೀಘ್ರವಾಗಿ ಲಾಭದೊಂದಿಗೆ ಮರಳಲಿದೆ ಎಂಬ ಭರವಸೆಯನ್ನೂ ಪಲಾಶ್ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣ ಹಿಂತಿರುಗಿಸದೆ ಸಂಪರ್ಕ ಕಡಿತಗೊಳಿಸಿದ ಆರೋಪ
ಪಲಾಶ್ ಅವರ ಭರವಸೆಯನ್ನು ನಂಬಿದ ವೈಭವ್ ಮಾನೆ ಅವರು ಹಂತ ಹಂತವಾಗಿ ಒಟ್ಟು 40 ಲಕ್ಷ ರೂಪಾಯಿಗಳನ್ನು ಗೂಗಲ್ ಪೇ ಮತ್ತು ನಗದು ರೂಪದಲ್ಲಿ ನೀಡಿದ್ದರು. ಆದರೆ, ದೂರುದಾರರು ಆರೋಪಿಸುವಂತೆ ಪಲಾಶ್ ಹೇಳಿದ ಸಿನಿಮಾ ಪೂರ್ಣಗೊಳ್ಳಲೇ ಇಲ್ಲ. ತಾವು ಹೂಡಿಕೆ ಮಾಡಿದ ಹಣವನ್ನು ಮರಳಿ ಕೇಳಿದಾಗ ಆರಂಭದಲ್ಲಿ ಪಲಾಶ್ ಅವರು ಹಣ ನೀಡುವುದಾಗಿ ಹೇಳಿದ್ದರು. ಆದರೆ ನಂತರ ವೈಭವ್ ಅವರ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಪಲಾಶ್, ಕೊನೆಗೆ ಅವರ ಫೋನ್ ನಂಬರ್ ಅನ್ನು ಕೂಡ ಬ್ಲಾಕ್ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಹಲವಾರು ತಿಂಗಳುಗಳ ಕಾಲ ಕಾದರೂ ಹಣ ಬರದಿದ್ದಾಗ ವೈಭವ್ ಮಾನೆ ಸಾಂಗ್ಲಿ ಪೊಲೀಸರ ಮೊರೆ ಹೋಗಿದ್ದು, ವಹಿವಾಟಿನ ದಾಖಲೆಗಳನ್ನು ಸಲ್ಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಬಿರಿಯಾನಿಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿಯ ಹತ್ಯೆ | ಶವದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಅಶ್ಲೀಲ ವಿಡಿಯೋ ನೋಡಿದ ಪತ್ನಿ!



















