ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭಾರಿ ದಂಡ ವಿಧಿಸಿದೆ. ಇತ್ತೀಚೆಗೆ ಲಾಹೋರ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ಅಸಭ್ಯ ವರ್ತನೆ ತೋರಿದ ಕಾರಣಕ್ಕಾಗಿ ರೌಫ್ ಅವರಿಗೆ ಪಂದ್ಯದ ಸಂಭಾವನೆಯ ಶೇಕಡಾ 20ರಷ್ಟು ದಂಡ ವಿಧಿಸಲಾಗಿದೆ. ಇದರ ಜೊತೆಗೆ ಅವರ ಖಾತೆಗೆ ಒಂದು ಡಿಮೆರಿಟ್ ಅಂಕವನ್ನೂ ಕೂಡ ಸೇರ್ಪಡೆ ಮಾಡಲಾಗಿದೆ.
ಭಾನುವಾರ ನಡೆದ ಈ ಹೈವೋಲ್ಟೇಜ್ ಪಂದ್ಯದ ವೇಳೆ ಇಂಗ್ಲೆಂಡ್ ತಂಡದ ಆಲ್ ರೌಂಡರ್ ವಿಲ್ ಜ್ಯಾಕ್ಸ್ ಅವರೊಂದಿಗೆ ಹ್ಯಾರಿಸ್ ರೌಫ್ ವಾಗ್ವಾದಕ್ಕಿಳಿದಿದ್ದರು. ಕ್ರೀಡಾಸ್ಫೂರ್ತಿಗೆ ಧಕ್ಕೆ ತರುವಂತಹ ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ, ನೀತಿಸಂಹಿತೆ (Code of Conduct) ಹಂತ 1ರ ಅಡಿಯಲ್ಲಿ ರೌಫ್ ಅವರನ್ನು ದೋಷಿ ಎಂದು ನಿರ್ಣಯಿಸಿದೆ. ಈ ಹೊಸ ಡಿಮೆರಿಟ್ ಅಂಕದ ಸೇರ್ಪಡೆಯಿಂದಾಗಿ ಕಳೆದ 24 ತಿಂಗಳ ಅವಧಿಯಲ್ಲಿ ರೌಫ್ ಒಟ್ಟು ಐದು ಡಿಮೆರಿಟ್ ಅಂಕಗಳನ್ನು ಕಲೆಹಾಕಿದಂತಾಗಿದೆ. ನಿಯಮಾವಳಿಗಳ ಪ್ರಕಾರ, ಇದು ಅವರ ಭವಿಷ್ಯದ ಪಂದ್ಯಗಳಿಗೆ ದೊಡ್ಡ ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದ್ದು, ಮುಂದಿನ ಪಂದ್ಯಗಳಿಂದ ಅಮಾನತುಗೊಳ್ಳುವ ಭೀತಿ ಎದುರಾಗಿದೆ.
ಮೈದಾನದಲ್ಲಿ ನಡೆದಿದ್ದೇನು? ವಾಗ್ವಾದದ ಹಿಂದಿನ ಕಹಿಸತ್ಯ
ಈ ವಿವಾದಾತ್ಮಕ ಘಟನೆಯು ಪಾಕಿಸ್ತಾನದ ಇನಿಂಗ್ಸ್ನ 46ನೇ ಓವರ್ನ ಅಂತ್ಯದಲ್ಲಿ ಜರುಗಿತು. ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಹ್ಯಾರಿಸ್ ರೌಫ್, ಅಂಪೈರ್ ಬಳಿ ವೈಡ್ ಎಸೆತಕ್ಕಾರಗಿ ಮನವಿ ಮಾಡುವ ವೇಳೆ ವಿಲ್ ಜ್ಯಾಕ್ಸ್ ಅವರೊಂದಿಗೆ ಅನಗತ್ಯ ವಾಗ್ವಾದ ಆರಂಭಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ, ಮೈದಾನದಲ್ಲಿದ್ದ ಅಂಪೈರ್ ಶರಫುದ್ದೌಲ ಇಬ್ನೆ ಶಾಹಿದ್ ಅವರು ಎಚ್ಚರಿಕೆ ನೀಡಿದರೂ, ರೌಫ್ ಅದನ್ನು ಲೆಕ್ಕಿಸದೆ ತಮ್ಮ ಬ್ಯಾಟ್ ಎತ್ತಿ ಜ್ಯಾಕ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂಪೈರ್ರನ್ನು ದಾಟಿ ಹೋಗಿ ಇಂಗ್ಲೆಂಡ್ ಆಟಗಾರನತ್ತ ನುಗ್ಗಿದ್ದು ಐಸಿಸಿಯ ಕಣ್ಣು ಕೆಂಪಾಗಲು ಪ್ರಮುಖ ಕಾರಣವಾಯಿತು.
ಐಸಿಸಿ ನೀತಿಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ರೌಫ್ ವಿರುದ್ಧ ಅಧಿಕೃತ ಆರೋಪ ದಾಖಲಿಸಲಾಗಿದೆ. ನಿಯಮಗಳ ಪ್ರಕಾರ, ಯಾವುದೇ ಆಟಗಾರ 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಡಿಮೆರಿಟ್ ಅಂಕಗಳನ್ನು ಪಡೆದರೆ, ಅವುಗಳನ್ನು ಸಸ್ಪೆನ್ಷನ್ ಅಂಕಗಳಾಗಿ ಪರಿವರ್ತಿಸಲಾಗುತ್ತದೆ. ಎರಡು ಸಸ್ಪೆನ್ಷನ್ ಅಂಕಗಳು ಒಟ್ಟುಗೂಡಿದರೆ ಆಟಗಾರನು ಒಂದು ಟೆಸ್ಟ್ ಅಥವಾ ಎರಡು ಏಕದಿನ/ಟಿ20 ಪಂದ್ಯಗಳಿಂದ ನಿಷೇಧಕ್ಕೊಳಗಾಗಬೇಕಾಗುತ್ತದೆ. ಈ ಶಿಕ್ಷೆಯನ್ನು ಮ್ಯಾಚ್ ರೆಫರಿ ಜೆಫ್ ಕ್ರೋವ್ ಅವರು ಪ್ರಸ್ತಾಪಿಸಿದ್ದು, ರೌಫ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ.
ನಿಧಾನಗತಿಯ ಬೌಲಿಂಗ್: ಇಂಗ್ಲೆಂಡ್ಗೂ ದಂಡದ ಬಿಸಿ
ಇದೇ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಇಂಗ್ಲೆಂಡ್ ತಂಡಕ್ಕೂ ದಂಡ ವಿಧಿಸಲಾಗಿದೆ. ನಿಗದಿತ ಸಮಯದೊಳಗೆ ಮೂರು ಓವರ್ಗಳನ್ನು ಕಡಿಮೆ ಬೌಲ್ ಮಾಡಿದ ಕಾರಣ, ಇಂಗ್ಲೆಂಡ್ ತಂಡದ ಆಟಗಾರರಿಗೆ ಮ್ಯಾಚ್ ಫೀಸ್ನ ಶೇಕಡಾ 15ರಷ್ಟು ದಂಡ ವಿಧಿಸಲಾಗಿದೆ. ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಕೂಡ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಅಂದಹಾಗೆ, ಈ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಕೇವಲ ಒಂದು ವಿಕೆಟ್ ರೋಚಕ ಜಯ ಸಾಧಿಸಿ ತ್ರಿಕೋನ ಸರಣಿಯ ಫೈನಲ್ಗೆ ಲಗ್ಗೆ ಇಟ್ಟಿತ್ತು. 243 ರನ್ಗಳ ಗುರಿ ಬೆನ್ನತ್ತಿದ್ದ ಪಾಕ್, 154 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಉಪನಾಯಕ ಶಾದಾಬ್ ಖಾನ್ (ಅಜೇಯ ಶತಕ) ಹಾಗೂ ಹ್ಯಾರಿಸ್ ರೌಫ್ ಕೊನೆಯ ವಿಕೆಟ್ಗೆ 89 ರನ್ಗಳ ಅಮೂಲ್ಯ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಕ್ಟೋಬರ್ 31 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವು ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ:15ನೇ ವಯಸ್ಸಿಗೆ ಡಬ್ಲ್ಯುಪಿಎಲ್ ಇತಿಹಾಸ ಸೃಷ್ಟಿಸಿದ ಕರ್ನಾಟಕದ ಉಮಾ ಕಾಶ್ವಿ



















