ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮಂಗಳವಾರ ಕ್ವೆಟ್ಟಾಗೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಗುರಿಯಾಗಿಸಿ ಪ್ರಬಲ ಸ್ಫೋಟ ನಡೆಸಲಾಗಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಸಿಂಧ್-ಬಲೂಚಿಸ್ತಾನ್ ಗಡಿಯ ಸಮೀಪವಿರುವ ಸುಲ್ತಾನ್‌ಕೋಟ್ ಪ್ರದೇಶದ ಬಳಿ ರೈಲ್ವೆ ಹಳಿಯ ಮೇಲೆ ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು, ಕನಿಷ್ಠ ಆರು ಬೋಗಿಗಳು ಹಳಿತಪ್ಪಿವೆ.
ಬಂಡುಕೋರ ಗುಂಪಾದ ‘ಬಲೂಚ್ ರಿಪಬ್ಲಿಕ್ ಗಾರ್ಡ್ಸ್’ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಪಾಕಿಸ್ತಾನ ಸೇನಾ ಸಿಬ್ಬಂದಿ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಇದನ್ನು ಗುರಿಯಾಗಿಸಲಾಯಿತು ಎಂದು ಸಂಘಟನೆ ಹೇಳಿಕೊಂಡಿದೆ. “ಆಕ್ರಮಿತ ಪಾಕಿಸ್ತಾನ ಸೇನೆಯ ಯೋಧರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಈ ದಾಳಿ ನಡೆಸಲಾಗಿದೆ. ಸ್ಫೋಟದ ಪರಿಣಾಮವಾಗಿ, ಹಲವಾರು ಸೈನಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಬಲೂಚಿಸ್ತಾನಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುತ್ತವೆ,” ಎಂದು ಸಂಘಟನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಮತ್ತು ಭದ್ರತಾ ಪಡೆಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ದೃಶ್ಯಗಳಲ್ಲಿ ಹಲವರು ಗಾಯಗೊಂಡಿರುವುದು ಕಂಡುಬಂದಿದೆ. ಆದರೆ, ಇದುವರೆಗೆ ಯಾವುದೇ ಸಾವಿನ ಬಗ್ಗೆ ಅಧಿಕೃತ ವರದಿ ಬಂದಿಲ್ಲ.
“ಜಾಫರ್ ಎಕ್ಸ್‌ಪ್ರೆಸ್ ಮೇಲೆ ಸರಣಿ ದಾಳಿಗಳು”
ಕ್ವೆಟ್ಟಾ ಮತ್ತು ಪೆಶಾವರ್ ನಡುವೆ ಸಂಚರಿಸುವ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಇತ್ತೀಚಿನ ತಿಂಗಳುಗಳಲ್ಲಿ ಪದೇಪದೇ ದಾಳಿಗಳು ನಡೆಯುತ್ತಿವೆ. ಅವೆಂದರೆ-
ಮಾರ್ಚ್ 11: ಬೋಲಾನ್ ಪ್ರದೇಶದಲ್ಲಿ ರೈಲನ್ನು ಅಪಹರಿಸಿ, 21 ಪ್ರಯಾಣಿಕರು ಮತ್ತು ನಾಲ್ವರು ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು. ನಂತರ ಭದ್ರತಾ ಪಡೆಗಳು 33 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದವು.
ಜೂನ್: ಜಾಕೋಬಾಬಾದ್‌ನಲ್ಲಿ ರಿಮೋಟ್ ಕಂಟ್ರೋಲ್ ಸ್ಫೋಟಕದಿಂದ ನಾಲ್ಕು ಬೋಗಿಗಳು ಹಳಿತಪ್ಪಿದ್ದವು.
ಆಗಸ್ಟ್ 4: ಕೋಲ್ಪುರ್ ಬಳಿ ಬಂದೂಕುಧಾರಿಗಳು ರೈಲಿನ ಇಂಜಿನ್‌ಗೆ ಗುಂಡು ಹಾರಿಸಿದ್ದರು. ದಾಳಿಯ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಹೊತ್ತುಕೊಂಡಿತ್ತು.
ಆಗಸ್ಟ್ 7: ಸಿಬಿ ರೈಲ್ವೆ ನಿಲ್ದಾಣದ ಬಳಿ ರೈಲು ಹಾದುಹೋದ ತಕ್ಷಣವೇ ಹಳಿಯಲ್ಲಿದ್ದ ಬಾಂಬ್ ಸ್ಫೋಟಗೊಂಡಿತ್ತು.
ಆಗಸ್ಟ್ 10: ಮಸ್ತುಂಗ್ ಜಿಲ್ಲೆಯಲ್ಲಿ ಐಇಡಿ ಸ್ಫೋಟದಿಂದ ಆರು ಬೋಗಿಗಳು ಹಳಿತಪ್ಪಿ ನಾಲ್ವರು ಗಾಯಗೊಂಡಿದ್ದರು.
ಸೆಪ್ಟೆಂಬರ್ 24: ಬಲೂಚಿಸ್ತಾನದ ಮಸ್ತುಂಗ್ ಪ್ರದೇಶದಲ್ಲಿ ಇದೇ ರೈಲಿನ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದರು.