ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ವಾಯುಪಡೆಯು ಪ್ರತಿದಾಳಿ ನಡೆಸಿದ್ದಕ್ಕೆ ಪಾಕಿಸ್ತಾನ ತತ್ತರಿಸಿಹೋಗಿದೆ. ಮೊದಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಭಾರತದ ದಾಳಿಯಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಹೌದು, ಭಾರತವು ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿಗೆ ಪಾಕಿಸ್ತಾನದ ಎಫ್-16 ಖಂಡಾತರ ಯುದ್ಧವಿಮಾನ, ಸಿ-130, ಎಚ್ ಕ್ಯೂ-9 ಯುದ್ಧವಿಮಾನಗಳು ಧ್ವಂಸಗೊಂಡಿವೆ. ಇದರಿಂದಾಗಿ ಪಾಕಿಸ್ತಾನಕ್ಕೆ ಸುಮಾರು 1.12 ಶತಕೋಟಿ ಡಾಲರ್ ಅಂದರೆ, ಪಾಕಿಸ್ತಾನದ ಕರೆನ್ಸಿ ಲೆಕ್ಕಾಚಾರದಲ್ಲಿ 31 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ವರದಿ ತಿಳಿಸಿದೆ.
ಎಫ್-16 ಖಂಡಾತರ ಯುದ್ಧವಿಮಾನ, ಸಿ-130, ಎಚ್ ಕ್ಯೂ-9 ಯುದ್ಧವಿಮಾನಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದ್ದು, ಇವುಗಳನ್ನು ರಿಪೇರಿ ಮಾಡಲು 2,800 ಕೋಟಿ ರೂಪಾಯಿ ಬೇಕಾಗಿದೆ ಎಂದು ಹೇಳಲಾಗುತ್ತಿದೆ. ಸರ್ಗೋಡಾ, ನೂರ್ ಖಾನ್ ಸೇರಿ ಪಾಕಿಸ್ತಾನದ ಮೂರು ವಾಯುನೆಲೆಗಳ ಮೇಲೆ ಭಾರತದ ವಾಯುಪಡೆ ದಾಳಿ ನಡೆಸಿತ್ತು.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಮೇ 7ರಂದು ಕೈಗೊಂಡ ವಾಯುದಾಳಿಯಲ್ಲ ಪಾಕಿಸ್ತಾನಿ ಉಗ್ರರ 9 ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಇದರಲ್ಲಿ ನೂರಾರು ಉಗ್ರರು ಹತರಾಗಿದ್ದರು. ಜೈಶೆ ಮೊಹಮ್ಮದ್, ಲಷ್ಕರೆ ತಯ್ಬಾ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳ ನೆಲೆಗಳನ್ನು ಸೇನೆಯು ಧ್ವಂಸಗೊಳಿಸಿತ್ತು. ಇದಾದ ಬಳಿಕ ಪಾಕ್ ವಾಯುನೆಲೆಗಳನ್ನೂ ಗುರಿಯಾಗಿಸಿ ದಾಳಿ ನಡೆದಿತ್ತು.