ಇಸ್ಲಾಮಾಬಾದ್: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಉಗ್ರ ಪೋಷಣೆಯ ದೇಶವು ಕಂಗಾಲಾಗಿ ಹೋಗಿದೆ. ಮೊದಲೇ ಆರ್ಥಿಕವಾಗಿ ದಿವಾಳಿಯಾಗಿದ್ದ ಪಾಕಿಸ್ತಾನವೀಗ ಭಾರತದ ದಾಳಿಯಿಂದ ಪತರಗುಟ್ಟಿ ಹೋಗಿದ್ದು, ನಮಗೆ ಸಾಲ ಕೊಡಿ ಎಂಬುದಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಪಾಕಿಸ್ತಾನದ ಹಣಕಾಸು ವ್ಯವಹಾರಗಳ ಸಚಿವಾಲಯದಿಂದಲೇ ಸಾಲಕ್ಕಾಗಿ ಅಂಗಲಾಚಿರುವ ಸಂಗತಿ ಬಯಲಾಗಿದೆ.
ಪಾಕಿಸ್ತಾನದ ಹಣಕಾಸು ವ್ಯವಹಾರಗಳ ಸಚಿವಾಲಯದಿಂದ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. “ವೈರಿಯ (ಭಾರತ) ದಾಳಿಯಿಂದಾಗಿ ಪಾಕಿಸ್ತಾನಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟವುಂಟಾಗಿದೆ. ಹಾಗಾಗಿ, ಅಂತಾರಾಷ್ಟ್ರೀಯ ಸಹಭಾಗಿದಾರರು ಪಾಕಿಸ್ತಾನಕ್ಕೆ ಸಾಲದ ನೆರವು ನೀಡಬೇಕು. ಆ ಮೂಲಕ ಪಾಕಿಸ್ತಾನವು ಸ್ಥಿರವಾಗಿ ನಿಲ್ಲಲು ಸಹಾಯ ಮಾಡಬೇಕು” ಎಂದು ಸಚಿವಾಲಯದ ಖಾತೆಯಿಂದಲೇ ಪೋಸ್ಟ್ ಮಾಡಲಾಗಿದೆ.
ತಿಪ್ಪೆ ಸಾರಿಸಿದ ಪಾಕಿಸ್ತಾನ
ಜಾಗತಿಕ ಸಂಸ್ಥೆಗಳಿಗೆ ಹಣ ನೀಡುವಂತೆ ಮಾಡಿದ ಪೋಸ್ಟ್ ವೈರಲ್ ಆಗುತ್ತಲೇ ಪಾಕಿಸ್ತಾನವು ತಿಪ್ಪೆ ಸಾರಿಸುವ ಕೆಲಸ ಮಾಡಿದೆ. “ನಾವು ಯಾವುದೇ ಜಾಗತಿಕ ಸಂಸ್ಥೆಗಳಿಗೆ ಹಣ ನೀಡುವಂತೆ ಮನವಿ ಮಾಡಿಲ್ಲ. ಪಾಕಿಸ್ತಾನದ ಹಣಕಾಸು ವ್ಯವಹಾರಗಳ ಸಚಿವಾಲಯದ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್ ಗಳು ಇಂತಹ ಪೋಸ್ಟ್ ಮಾಡಿದ್ದಾರೆ” ಎಂದು ಪಾಕಿಸ್ತಾನ ಸರ್ಕಾರವು ಸ್ಪಷ್ಟನೆ ನೀಡಿದೆ.
ಇದರ ಮಧ್ಯೆಯೇ, ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಹಣಕಾಸು ನೆರವು ನೀಡಬಾರದು ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗೆ (ಐಎಂಎಫ್) ಭಾರತ ಮನವಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನವು ಜಾಗತಿಕ ಸಂಸ್ಥೆಗಳಿಂದ ಹಣ ಪಡೆದು, ಅದನ್ನು ಉಗ್ರವಾದದ ಪೋಷಣೆಗೆ ಬಳಸುತ್ತದೆ. ಹಾಗಾಗಿ, ಯಾರೂ ಪಾಕಿಸ್ತಾನಕ್ಕೆ ಸಾಲದ ನೆರವಾಗಲಿ, ಧನಸಹಾಯವನ್ನಾಗಲಿ ಮಾಡಬಾರದು ಎಂಬುದಾಗಿ ಭಾರತ ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.



















