ಯುದ್ಧ…ಯುದ್ಧ…ಯುದ್ಧ…ಹೌದು….ಭಾರತ-ಪಾಕ್ ಗಡಿಯಲ್ಲಿ ಸಮರದ ರಣಕಹಳೆ ಮೊಳಗಿಯಾಗಿದೆ. ಉಭಯ ದೇಶಗಳ ನಡುವಿನ ಜಂಗೀಕುಸ್ತಿ ಇದೀಗ ತಾರಕಕ್ಕೇರಿದೆ. 21ನೇ ಶತಮಾನದ ಮೊದಲ ಸಮರಕ್ಕೆ ನಿಜಕ್ಕೂ ಬಾನು ಸಾಕ್ಷಿಯಾಗುತ್ತಿದೆ. ಆಪರೇಷನ್ ಸಿಂಧೂರ್ ಬಳಿಕ ಕೊತ ಕೊತ ಕುದಿಯುತ್ತಿರುವ ಪಾಕಿಸ್ತಾನ, ಭಾರತದ ಮೇಲೀಗ ದಾಳಿಗೆ ಮುಂದಾಗಿದೆ. ನಿನ್ನೆ ರಾತ್ರಿ ಪಾಪಿ ಪಾಕಿಗಳು ದೆಹಲಿಯನ್ನು ಟಾರ್ಗೆಟ್ ಮಾಡಿ ದಾಳಿ ಯೋಜನೆ ರೂಪಿಸಿದ್ದವು. ಆದರೆ, ಭಾರತದ ಎಸ್ 400 ಎನ್ನುವ ಸುದರ್ಶನ ಚಕ್ರದ ಕಾವಲಿಗೆ ಪಾಕಿಗಳ ಪಾಪದ ಕೃತ್ಯ ಆರಂಭದಲ್ಲೇ ಅಂತ್ಯ ಕಂಡಿದೆ.
ಪಂಜಾಬ್ ನ ಅಮೃತಸರ ಬಳಿ ಭಾರೀ ಸ್ಫೋಟ
ಭಾರತದ ರಾಜಧಾನಿ ದೆಹಲಿಯನ್ನು ಗುರಿಯಾಗಿಸಿ ನಿನ್ನೆ ರಾತ್ರಿ ಪಾಕಿಸ್ತಾನ ಕ್ಷಿಪಣಿ ದಾಳಿ ಶುರುಮಾಡಿತ್ತು. ಆದರೆ, ಗಡಿಯಲ್ಲೇ ಕಾವಲಿಗೆ ನಿಂತಿರುವ ಎಸ್ 400 ಮಿಸೈಲ್ ಡಿಟೆಕ್ಟರ್ ಕ್ಷಣಾರ್ಧದಲ್ಲಿ ಪಾಕಿಗಳ ಕನಸನ್ನು ಸುಟ್ಟು ಬೂದಿ ಮಾಡಿದೆ. ಪಂಜಾಬ್ ನ ಅಮೃತಸರದ ಸರ್ಸಾ ಬಳಿ ದೆಹಲಿಯತ್ತ ಮುನ್ನುಗ್ಗುತ್ತಿದ್ದ ಪಾಕಿಸ್ತಾನದ ಫತೇಹ್ 1 ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ.
ಗುರುವಾರ 400, ಶುಕ್ರವಾರ 400ಕ್ಕೂ ಹೆಚ್ಚು
ಗುರುವಾರ ಭಾರತದ ಮೇಲೆ ಮೊದಲ ಬಾರಿ ನೇರಾನೇರ ಹೋರಾಟಕ್ಕಿಳಿದಿದ್ದ ಪಾಕ್ 400ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಗಳನ್ನು ಅಖಾಡಕ್ಕುಳಿಸಿತ್ತು. ಆದರೆ, ಭಾರತ ರೂಪಿಸಿದ್ದ ತ್ರಿಶೂಲ ವ್ಯೂಹದಲ್ಲಿ ಸಿಲುಕಿದ ಡ್ರೋನ್ ಗಳು ಉಡೀಸ್ ಆಗಿದ್ವು. ಇಷ್ಟಕ್ಕೇ ಸುಮ್ಮನಾಗದ ಪಾಕ್ ನಿನ್ನೆ ಮತ್ತೆ ಟರ್ಕಿ ನಿರ್ಮಿತ ಆತ್ಮಾಹುತಿ ಡ್ರೋನ್ ಗಳನ್ನು ಭಾರತದ ನಾಲ್ಕು ರಾಜ್ಯಗಳನ್ನು ಗುರಿಯಾಗಿಸಿ ಫೀಲ್ಡಿಗಿಳಿಸಿತ್ತು.
ಜಮ್ಮು-ಕಾಶ್ಮೀರ, ಗುಜರಾತ್, ಪಂಜಾಬ್ ಮತ್ತು ರಾಜಸ್ಥಾನವನ್ನು ಗುರಿಯಾಗಿಸಿ ಈ ಡ್ರೋನ್ ಅಸ್ತ್ರ ಪ್ರಯೋಗಿಸಿತ್ತು. ಆದರೆ, ಭಾರತದ ಗಡಿ ದಾಟುತ್ತಿದ್ದಂತಲೇ ಈ ಎಲ್ಲ ಡ್ರೋನ್ ಗಳನ್ನು ಆಗಸದಲ್ಲೇ ಮಟಾಶ್ ಮಾಡಿದೆ.
4 ರಾಜ್ಯ-26 ಸ್ಥಳಗಳು, ಕಾರ್ಗತ್ತಲಲ್ಲಿ ದಾಳಿ
ಭಾರತದ ಜಮ್ಮು-ಕಾಶ್ಮೀರದ ಜಮ್ಮು, ನಗ್ರೋಟಾ, ಶ್ರೀನಗರ, ಅವಂತಿಪೋರಾ, ಕುಪ್ವಾರಾ, ಸಾಂಬಾ, ರಜೌರಿ, ಪೂಂಛ್, ಬಾರಾಮುಲ್ಲಾ, ರಾಜಸ್ಥಾನದ ಪೋಖ್ರಾಣ್, ಶ್ರೀಗಂಗಾನಗರ, ಬಾಡ್ಮೇಲ್, ಉತ್ತರಲೈ, ಫಲೋಡಿ, ಜೈಸಲ್ಮೇರ್, ಪಂಜಾಬ್ ನ ಪಠಾಣ್ ಕೋಟ್, ಅಮೃತಸರ, ಕಪೂರ್ತಲಾ, ಜಲಂಧರ್, ಲುಧಿಯಾನಾ, ಆದಂಪುರ, ಚಂಡೀಗಡ, ನಾಲ್ ಹಾಗೂ ಫಿರೋಜ್ ಪುರಗಳನ್ನು ಗುರಿಯಾಗಿಸಲಾಗಿತ್ತು.
ಅಷ್ಟೇ ಅಲ್ಲಾ ಗುಜರಾತ್ ನ ಭುಜ್ ಮೇಲೂ ಶುಕ್ರವಾರ ರಾತ್ರಿ ಎಂಟರ ಸುಮಾರಿಗೆ ಈ ದಾಳಿಯನ್ನು ಪಾಕ್ ಆಯೋಜಿಸಿತ್ತು. ಆದ್ರೆ ಭಾರತದ ಆಕಾಶ್ ಏರ್ ಡಿಫೆನ್ಸ್ ಸಿಸ್ಟಂ ಎಲ್ಲ ಡ್ರೋನ್ ಗಳನ್ನು ಬಾನಲ್ಲೇ ಚಿಂದಿ ಉಡಾಯಿಸಿದೆ. ಈ ಮೂಲಕ ಪಾಕ್ ನ ಗರ್ವಭಂಗ ಮಾಡಲಾಗಿದೆ.