ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ವಿವಾದಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಾಕ್ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
ಭಾರತ ಹಾಗೂ ಪಾಕ್ ಮಧ್ಯೆ ಈ ಕುರಿತು ವಿವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಐಸಿಸಿ ವರ್ಚುವಲ್ ಸಭೆ ಆಯೋಜಿಸಿತ್ತು. ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದಿಗೆ ಸಭೆ ಮುಂದೂಡಲಾಗಿತ್ತು. ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಮುಂದಾಗಿರುವ ಪಾಕಿಸ್ತಾನ್, ಪ್ರಮುಖ ಷರತ್ತಿನೊಂದಿಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ಬಿಸಿಸಿಐನ ಹೈಬ್ರಿಡ್ ಮಾದರಿಯ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಪಿಸಿಬಿ, ಐಸಿಸಿಗೆ ಹೇಳಿದೆ. ಅಲ್ಲದೇ, ಪಾಕಿಸ್ತಾನವು ಹೈಬ್ರಿಡ್ ಮಾಡೆಲ್ ಮಾತ್ರವಲ್ಲದೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ದುಬೈನಲ್ಲಿ ನಡೆಸಲು ಒಪ್ಪಿಕೊಂಡಿದೆ. ಅಲ್ಲದೇ, ಮುಂದಿನ 7 ವರ್ಷಗಳವರೆಗೆ ಅಂದರೆ 2031ರ ವರೆಗೆ ನಡೆಯಲಿರುವ ಪ್ರತಿಯೊಂದು ಐಸಿಸಿ ಪಂದ್ಯಾವಳಿಯಲ್ಲಿಯೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಪಿಸಿಬಿಯ ಈ 7 ವರ್ಷಗಳ ಷರತ್ತಿನ ಹಿಂದೆ ಬಿಸಿಸಿಐಗೆ ಎದುರೇಟು ನೀಡುವ ಸಂಚು ಕೂಡ ಪಾಕ್ ಹೊಂದಿದೆ ಎನ್ನಲಾಗಿದೆ. 2031ರ ವರೆಗೆ ಪ್ರತಿ ವರ್ಷ ಪ್ರಮುಖ ಟೂರ್ನಿ ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಹೀಗಾಗಿ 2026 ರಲ್ಲಿ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. 2029ರಲ್ಲಿ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಭಾರತ ಮತ್ತು ಬಾಂಗ್ಲಾದೇಶ 2031 ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಗೆ ಆತಿಥ್ಯ ನೀಡಲಿವೆ. ಮುಂದಿನ ವರ್ಷ ಮಹಿಳೆಯರ ಏಕದಿನ ವಿಶ್ವಕಪ್ ಕೂಡ ಭಾರತದಲ್ಲಿ ನಡೆಯಲಿದೆ. ಹೀಗಾಗಿ 7 ವರ್ಷಗಳಲ್ಲಿ ನಡೆಯಲ್ಲಿರುವ ಐಸಿಸಿ ಟೂರ್ನಿಗಳಿಗೆ ಭಾರತದ ಆತಿಥ್ಯವೇ ಬಹುಪಾಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕ್ ಈ ಕುತಂತ್ರ ಉಪಯೋಗಿಸಿದೆ ಎನ್ನಲಾಗಿದೆ.