ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನದ ಸಂಘರ್ಷಕ್ಕೆ ಕದನವಿರಾಮ ಘೋಷಣೆಯಾದರೂ ಕುತಂತ್ರಿ ಪಾಕಿಸ್ತಾನವು ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸಿದೆ. ಇದಕ್ಕೆ ಭಾರತವೂ ಪ್ರತಿದಾಳಿ ಮೂಲಕ ತಕ್ಕ ಉತ್ತರ ನೀಡಿದೆ. ಇದರ ಬೆನ್ನಲ್ಲೇ, 2019ರ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕಿಸ್ತಾನದ ಸೇನೆಯ ಕೈವಾಡ ಇತ್ತು ಎಂದು ಖುದ್ದು ಪಾಕ್ ಸೇನೆಯ ವಕ್ತಾರರೇ ಒಪ್ಪಿಕೊಂಡಿದ್ದಾರೆ. ಆ ಮೂಲಕ ಪಾಕಿಸ್ತಾನವು ಎಂದಿಗೂ ಉಗ್ರ ಪೋಷಣೆಯ ರಾಷ್ಟ್ರ ಎಂಬುದನ್ನು ತಾನೇ ಒಪ್ಪಿಕೊಂಡಿದೆ.
“ಪುಲ್ವಾಮಾದಲ್ಲಿ ನಾವು ನಮ್ಮ ವ್ಯೂಹಾತ್ಮಕ ನೈಪುಣ್ಯವನ್ನು ಪ್ರದರ್ಶಿಸಿದೆವು” ಎಂದು ಪಾಕಿಸ್ತಾನದ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್ ಎಂದು ತಿಳಿಸಿದ್ದಾರೆ. ಇವರು ಪಾಕಿಸ್ತಾನ ವಾಯುಪಡೆಯ ಡೈರೆಕ್ಟರ್ ಜನರಲ್ ಪಬ್ಲಿಕ್ ರಿಲೇಷನ್ಸ್ ಕೂಡ ಆಗಿದ್ದಾರೆ. ಇವರು ಪುಲ್ವಾಮಾದ ಉಗ್ರರ ದಾಳಿಗೆ ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯ ಬೆಂಬಲ ಇತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
2019ರ ಫೆಬ್ರವರಿ 14ರಂದು ಪಾಕಿಸ್ತಾನದ ಉಗ್ರರು ಭಾರತದ ಸೇನಾ ವಾಹನಗಳನ್ನು ಗುರಿಯಾಗಿಸಿ ಸುಧಾರಿತ ಸ್ಫೋಟಕ ಸಾಧನಗಳ (ಐಇಡಿ) ಮೂಲಕ ದಾಳಿ ನಡೆಸಿದ್ದರು. ದಾಳಿಯಲ್ಲಿ ಭಾರತದ ಸುಮಾರು 40 ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕ ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡ ಇದೆ ಎಂಬ ಭಾರತದ ವಾದವನ್ನು ಪಾಕ್ ಅಲ್ಲಗಳೆದಿತ್ತು. ಈಗ ತನ್ನ ಕೈವಾಡ ಇರುವುದನ್ನು ತಾನೇ ಒಪ್ಪಿಕೊಂಡಿದೆ.
ಪುಲ್ವಾಮಾ ದಾಳಿಯ ಬಳಿಕ ಭಾರತ ಕೂಡ ಬಾಲಾಕೋಟ್ ವಾಯುದಾಳಿ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿತ್ತು. ಬಾಲಾಕೋಟ್ ಏರ್ ಸ್ಟ್ರೈಕ್ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಅಲ್ಲದೆ, ಭಾರತವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಉಗ್ರಪೋಷಣೆಯ ಕೃತ್ಯವನ್ನು ಬಯಲಿಗೆ ಎಳೆದಿತ್ತು.



















