ವಾಷಿಂಗ್ಟನ್: “ಭಾರತದೊಂದಿಗೆ ಭವಿಷ್ಯದ ಯುದ್ಧದ ಸಂದರ್ಭದಲ್ಲಿ ನಮ್ಮ ದೇಶಕ್ಕೆ ಅಭದ್ರತೆ ಕಾಡಿದರೆ ಅಣ್ವಸ್ತ್ರ ಬಳಸಿ ನಮ್ಮೊಂದಿಗೆ ಅರ್ಧ ಜಗತ್ತನ್ನೇ ನಾಶ ಮಾಡುತ್ತೇವೆ” ಎಂಬ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರ ವಿವಾದಾತ್ಮಕ ಹೇಳಿಕೆಯ ವಿರುದ್ಧ ಅಮೆರಿಕದ ಮಾಜಿ ಪೆಂಟಗನ್ ಅಧಿಕಾರಿ ಮೈಕೆಲ್ ರೂಬಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವು ‘ಯುದ್ಧ ಪ್ರಚೋದನೆ’ಯ ಮೂಲಕ ‘ದುಷ್ಟ ರಾಷ್ಟ್ರ’ದಂತೆ ವರ್ತಿಸುತ್ತಿದೆ ಎಂದು ಅವರು ದೂರಿದ್ದಾರೆ. ಮುನೀರ್ ಅವರ ಹೇಳಿಕೆಗಳನ್ನು 9/11 ದಾಳಿಯ ರೂವಾರಿ ಒಸಾಮಾ ಬಿನ್ ಲಾಡೆನ್‌ನ ಹೇಳಿಕೆಗಳಿಗೆ ಹೋಲಿಸಿರುವ ಮೈಕೆಲ್ ರೂಬಿನ್ ಅವರು, ಪಾಕ್ ಸೇನಾ ಮುಖ್ಯಸ್ಥ ಜ.ಮುನೀರ್ ಅವರನ್ನು “ಸೂಟ್‌ನಲ್ಲಿರುವ ಒಸಾಮಾ ಬಿನ್ ಲಾಡೆನ್” ಎಂದು ಕರೆದಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಮುನೀರ್ ಅವರು ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಅಮೆರಿಕದ ಸೇನಾ ಅಧಿಕಾರಿಗಳ ಸಭೆಯಲ್ಲಿ ಸೋಮವಾರ ವಿವಾದಿತ ಹೇಳಿಕೆಯನ್ನು ನೀಡಿದ್ದರು. ಈ ಬೆದರಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೇ, ಪಾಕಿಸ್ತಾನದ ಈ ರೀತಿಯ ಪರಮಾಣು ಬೆದರಿಕೆಗಳು ಸಾಮಾನ್ಯವಾಗಿದ್ದು, ಇಂತಹ ಹೇಳಿಕೆಗಳನ್ನು ಸ್ನೇಹಪರ ಮೂರನೇ ದೇಶದ ನೆಲದಿಂದ ನೀಡಿರುವುದು ವಿಷಾದನೀಯ ಎಂದು ಹೇಳಿಕೆ ನೀಡಿತ್ತು.
ಇದರ ಬೆನ್ನಲ್ಲೇ, ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೂಬಿನ್, “ಅಮೆರಿಕದ ನೆಲದಿಂದ ಪಾಕಿಸ್ತಾನದ ಇಂತಹ ಬೆದರಿಕೆಗಳು ಯಾವ ಕಾರಣಕ್ಕೂ ಸ್ವೀಕಾರಾರ್ಹವಲ್ಲ,” ಎಂದು ಹೇಳಿದ್ದಾರೆ. ಪಾಕಿಸ್ತಾನದ ಪರಮಾಣು ಬೆದರಿಕೆಗಳು ಭಯೋತ್ಪಾದಕರಿಗೆ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ‘ದುಷ್ಟತನ’ ಮೆರೆಯಲು ಅವಕಾಶ ನೀಡಬಹುದು ಎಂದೂ ಅವರು ಎಚ್ಚರಿಸಿದ್ದಾರೆ. ಪಾಕಿಸ್ತಾನವು ಸಾಂಪ್ರದಾಯಿಕ ರಾಜತಾಂತ್ರಿಕ ವಿವಾದಗಳಿಗಿಂತ ಭಿನ್ನವಾದ ಸವಾಲನ್ನು ಒಡ್ಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಅಮೆರಿಕನ್ನರು ಭಯೋತ್ಪಾದನೆಯನ್ನು ತಿರಸ್ಕರಿಸುತ್ತಾರೆ. ಆದರೆ ಅನೇಕ ಭಯೋತ್ಪಾದಕರ ಸೈದ್ಧಾಂತಿಕ ಆಧಾರಗಳನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಅಸಿಮ್ ಮುನೀರ್ ಸೂಟ್ ಹಾಕಿಕೊಂಡಿರುವ ಒಸಾಮಾ ಬಿನ್ ಲಾಡೆನ್,” ಎಂದು ರೂಬಿನ್ ಹೇಳಿದ್ದಾರೆ. ಮುನೀರ್ ಅವರ ಹೇಳಿಕೆಗಳು ಐಸಿಸ್ ಉಗ್ರರ ಹೇಳಿಕೆಯ ಮಾದರಿಯಲ್ಲಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ.
ಪಾಕಿಸ್ತಾನವು ಒಂದು ದೇಶವಾಗಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವೇ ಎಂಬ ಪ್ರಶ್ನೆಗಳನ್ನು ಮುನೀರ್ ಅವರ ಮಾತುಗಳು ಹುಟ್ಟುಹಾಕಿವೆ ಎಂದ ರೂಬಿನ್, ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಸುರಕ್ಷಿತಗೊಳಿಸಲು ಭವಿಷ್ಯದಲ್ಲಿ ಮಿಲಿಟರಿ ಹಸ್ತಕ್ಷೇಪದ ಸಾಧ್ಯತೆಯನ್ನೂ ಸೂಚಿಸಿದ್ದಾರೆ. “ಮುಂದಿನ ಆಡಳಿತದಲ್ಲಿ, ಇತರ ಸೀಲ್ ಟೀಮ್‌ಗಳು ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಭದ್ರಪಡಿಸಲು ಪ್ರವೇಶಿಸುವ ಸಮಯ ಬರುತ್ತದೆ.
ಏಕೆಂದರೆ ಇದಕ್ಕೆ ಪರ್ಯಾಯ ಮಾರ್ಗ ಇಲ್ಲ,” ಎಂದು ರೂಬಿನ್ ಹೇಳಿದ್ದಾರೆ.
ಅಲ್ಲದೇ ಪಾಕಿಸ್ತಾನವು ತನ್ನ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿ ಕ್ಷಮೆಯಾಚಿಸುವವರೆಗೆ, ಅಸಿಮ್ ಮುನೀರ್ ಸೇರಿದಂತೆ ಯಾವುದೇ ಪಾಕಿಸ್ತಾನಿ ಅಧಿಕಾರಿಗೆ ಅಮೆರಿಕ ವೀಸಾ ನೀಡಬಾರದು ಮತ್ತು ಅವರನ್ನು ‘ಪರ್ಸೋನಾ ನಾನ್ ಗ್ರ್ಯಾಟಾ’ ಎಂದು ಘೋಷಿಸಬೇಕು ಎಂದೂ ರೂಬಿನ್ ಒತ್ತಾಯಿಸಿದ್ದಾರೆ.