ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷವು ಉಲ್ಬಣಗೊಳ್ಳುತ್ತಿದೆ. ಅದರಲ್ಲೂ, ಪಾಕಿಸ್ತಾನವು 1999ರ ಕಾರ್ಗಿಲ್ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಮುಂಚೂಣಿ ಪ್ರದೇಶಗಳತ್ತ (ಫಾರ್ವರ್ಡ್ ಏರಿಯಾ) ಸೇನೆಯನ್ನು ನುಗ್ಗಿಸುತ್ತಿದ್ದು, ಭಾರತೀಯ ಸೇನೆಯು ಹೈ ಅಲರ್ಟ್ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದಾಗಿ ಗಡಿಯಲ್ಲಿ ಮತ್ತಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾದಂತಾಗಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ವಿಂಗ್ ಕಮಾಂಡ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಪಾಕಿಸ್ತಾನದ ಆಕ್ರಮಣಕಾರಿ ನೀತಿ ಬಗ್ಗೆ ವಿವರಣೆ ನೀಡಿದ್ದಾರೆ. “ಪಾಕಿಸ್ತಾನವು ಕಾರ್ಗಿಲ್ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಫಾರ್ವರ್ಡ್ ಏರಿಯಾಗಳತ್ತ ಸೇನೆಯನ್ನು ನುಗ್ಗಿಸುತ್ತಿದೆ. ಗಡಿಯಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ” ಎಂದು ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
“ಗಡಿಯಲ್ಲಿ ಪಾಕಿಸ್ತಾನ ಇದುವರೆಗೆ ನಡೆಸಿದ ದಾಳಿಯ ಯತ್ನಗಳನ್ನು ಭಾರತವು ಯಶಸ್ವಿಯಾಗಿ ವಿಫಲಗೊಳಿಸಿದೆ. ಈಗ ಸೈನಿಕರನ್ನು ಗಡಿಗಳಿಗೆ ಕಳುಹಿಸುತ್ತಿರುವ ಕಾರಣ ಭಾರತವು ಯಾವುದೇ ತುರ್ತು ಸಂದರ್ಭವನ್ನು ಎದುರಿಸಲು ಸಜ್ಜಾಗಿ ನಿಂತಿದೆ. ಭಾರತೀಯ ಸೇನೆಯು ಪಾಕಿಸ್ತಾನದ ಸೇನೆಯನ್ನು ಎದುರಿಸಲು ಸಕಲ ಸನ್ನದ್ಧವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನವು ಕಳೆದ ರಾತ್ರಿ ಭಾರತದ ಸುಮಾರು 26 ಪ್ರದೇಶಗಳ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಭಾರತದ ಸೇನೆಯು ದಾಳಿ ಯತ್ನಗಳನ್ನು ವಿಫಲಗೊಳಿಸಿದೆ. ಪಂಜಾಬ್ ಗಡಿಯಲ್ಲಿ ನಾಲ್ಕು ವಾಯುನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ದಾಳಿಗೆ ಯತ್ನಿಸಿದೆ. ಇದರಿಂದಾಗಿ ಭಾರತದ ಸೇನಾ ಪಡೆ ಹಾಗೂ ವಾಯುಪಡೆಗಳು ಹೈ ಅಲರ್ಟ್ ಆಗಿವೆ ಎಂದು ಮೂಲಗಳು ತಿಳಿಸಿವೆ.



















