ಇಸ್ಲಾಮಾಬಾದ್: ಅಮೆರಿಕ ಮಧ್ಯಸ್ಥಿಕೆ ವಹಿಸಿಕೊಂಡ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಏರ್ಪಟ್ಟಿದೆ. ಇದಾದ ಬಳಿಕವೂ ಪಾಪಿ ಪಾಕಿಸ್ತಾನವು ಗಡಿಯಲ್ಲಿ ಕದನವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ. ಇದಕ್ಕೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿದೆ. ಇದರ ಬೆನ್ನಲ್ಲೇ, “ಭಾರತವು ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಇದರಿಂದ ನಮ್ಮ ದೇಶಕ್ಕೆ ಭಾರಿ ಹಾನಿಯಾಗಿದೆ” ಎಂದು ಪ್ರಧಾನಿ ಶೆಹಬಾಜ್ ಷರೀಫ್ ಜಗತ್ತಿನೆದುರು ಒಪ್ಪಿಕೊಂಡಿದ್ದಾರೆ.
ಕದನವಿರಾಮ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಷರೀಫ್, “ಭಾರತವು ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಉಮೇದಿಯಲ್ಲಿತ್ತು. ನಮ್ಮನ್ನು ಕೂಡ ಯುದ್ಧಕ್ಕೆ ಪ್ರಚೋದಿಸುತ್ತಿತ್ತು. ಇದೇ ಕಾರಣಕ್ಕಾಗಿ ಕ್ಷಿಪಣಿ, ಯುದ್ಧವಿಮಾನಗಳ ಮೂಲಕ ನಮ್ಮ ದೇಶದ ವಾಯುನೆಲೆಗಳ ಮೇಲೆ ದಾಳಿ ನಡೆಸಿತು. ಇದರಿಂದಾಗಿ ನಮ್ಮ ದೇಶದಲ್ಲಿರುವ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳಿಗೆ ಹಾನಿಯಾಗಿದೆ” ಎಂದು ಭಾರತದ ದಾಳಿಯ ತೀವ್ರತೆಯನ್ನು ತೆರೆದಿಟ್ಟಿದ್ದಾರೆ.
“ನಾವು ಕದನವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಗಡಿಯಲ್ಲಿ ಶಾಂತಿ ಕಾಪಾಡಲು ನಾವು ಬದ್ಧರಾಗಿದ್ದೇವೆ” ಎಂದು ಕೂಡ ಶೆಹಬಾಜ್ ಷರೀಫ್ ಹೇಳಿದ್ದಾರೆ. ಆದರೆ, ಕದನವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಭಾರತದ ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಭಾರತ ಕೂಡ ಸತ ದಾಳಿ ಮೂಲಕ ತಿರುಗೇಟು ನೀಡಿದೆ.
ಕದನವಿರಾಮದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲು ಘೋಷಣೆ ಮಾಡಿದ್ದರು. ಭಾರತ ಹಾಗೂ ಪಾಕಿಸ್ತಾನವು ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಶಾಂತಿ ಕಾಪಾಡಲು ಎರಡೂ ದೇಶಗಳು ಬದ್ಧತೆ ತೋರ್ಪಡಿಸಿವೆ ಎಂದು ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದರು.


















