ನವದೆಹಲಿ : ಇಂದು ಮುಂಜಾನೆ ಸೂರ್ಯ ಉದಯಿಸುವ ವೇಳೆಗೆ ಜಾಗತಿಕ ಐಟಿ ದೈತ್ಯ ‘ಒರಾಕಲ್‘ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಭಾರಿ ಆಘಾತ ನೀಡಿದೆ. ಕಂಪನಿಯು ಬೃಹತ್ ಪ್ರಮಾಣದ ಲೇ-ಆಫ್(ಕೆಲಸದಿಂದ ವಜಾ) ಪ್ರಕ್ರಿಯೆಯನ್ನು ಆರಂಭಿಸಿದ್ದು, ಮುಂಜಾನೆ 5 ರಿಂದ 6 ಗಂಟೆಯ ಸುಮಾರಿಗೆ ಸಾವಿರಾರು ಉದ್ಯೋಗಿಗಳಿಗೆ ವಜಾ ಮಾಡುವ ಇಮೇಲ್ ಕಳುಹಿಸುವ ಮೂಲಕ ಸಂಸ್ಥೆಯು ತನ್ನ ಪುನರ್ ರಚನಾ ಪ್ರಕ್ರಿಯೆಯನ್ನು ಅಧಿಕೃತಗೊಳಿಸಿದೆ. ಈ ಕ್ರಮದಿಂದಾಗಿ ವಿಶ್ವದಾದ್ಯಂತ ಸುಮಾರು 30,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಭಾರತದ ಐಟಿ ವಲಯಕ್ಕೆ ಇದು ದೊಡ್ಡ ಹೊಡೆತ ನೀಡಿದೆ.
ಒರಾಕಲ್ ಸಂಸ್ಥೆಯ ಈ ಹಠಾತ್ ನಿರ್ಧಾರದಿಂದ ಭಾರತವು ಅತಿ ಹೆಚ್ಚು ತೊಂದರೆಗೆ ಒಳಗಾದ ದೇಶಗಳಲ್ಲಿ ಒಂದಾಗಿದೆ. ಲಭ್ಯವಿರುವ ವರದಿಗಳ ಪ್ರಕಾರ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 30,000 ಉದ್ಯೋಗಿಗಳಲ್ಲಿ ಸರಿಸುಮಾರು 12,000 ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅಂದರೆ, ಭಾರತದ ಒಟ್ಟು ಕಾರ್ಯಪಡೆಯ ಸುಮಾರು ಶೇ.40ರಷ್ಟು ನೌಕರರು ಬೀದಿಗೆ ಬಿದ್ದಂತಾಗಿದೆ. ಜಾಗತಿಕವಾಗಿ ಸಂಸ್ಥೆಯು ತನ್ನ ಒಟ್ಟು ಸಿಬ್ಬಂದಿಯಲ್ಲಿ ಶೇ.18ರಷ್ಟು ಅಂದರೆ ಸುಮಾರು 30,000 ಜನರನ್ನು ವಜಾ ಮಾಡಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಾದ ಎಕ್ಸ್ (X), ರೆಡ್ಡಿಟ್ ಮತ್ತು ಬ್ಲೈಂಡ್‌ನಲ್ಲಿ ನೌಕರರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದು, ಹಲವು ತಂಡಗಳಲ್ಲಿ ಅರ್ಧದಷ್ಟು ಸಿಬ್ಬಂದಿಯನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.
ಇಮೇಲ್ ಮೂಲಕ ದಿಢೀರ್ ವಜಾ
ನೌಕರರಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಅಥವಾ ಮ್ಯಾನೇಜರ್‌ಗಳ ಜೊತೆ ಚರ್ಚೆ ನಡೆಸದೆ ನೇರವಾಗಿ ಇಮೇಲ್ ಮೂಲಕ ಈ ನಿರ್ಧಾರ ತಿಳಿಸಿರುವುದು ಉದ್ಯೋಗಿಗಳಲ್ಲಿ ಆಕ್ರೋಶ ಮೂಡಿಸಿದೆ. “ಬೆಳಿಗ್ಗೆ 5 ಗಂಟೆಗೆ ಇಮೇಲ್ ಬಂತು, 20 ವರ್ಷಗಳ ಸೇವೆಯ ನಂತರ ಸಿಕ್ಕ ಬಹುಮಾನವಿದು” ಎಂದು ಹಿರಿಯ ಉದ್ಯೋಗಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಮೇಲ್ ತಲುಪಿದ ಕೆಲವೇ ಕ್ಷಣಗಳಲ್ಲಿ ಆಯಾ ನೌಕರರ ಇಂಟರ್ನಲ್ ಸಿಸ್ಟಮ್ ಆಕ್ಸೆಸ್ (Internal System Access) ಅನ್ನು ರದ್ದುಗೊಳಿಸಲಾಗಿದೆ. ಕಾರ್ಯಾಚರಣೆಯನ್ನು ಸರಳಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಒರಾಕಲ್ ತನ್ನ ಆಂತರಿಕ ಸಂದೇಶದಲ್ಲಿ ಸಮರ್ಥಿಸಿಕೊಂಡಿದೆ.
ಎಐ ಕಾರಣವೇ?
ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ಸೆಂಟರ್‌ಗಳ ಮೂಲಸೌಕರ್ಯದ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಒರಾಕಲ್ ಸಂಪನ್ಮೂಲಗಳನ್ನು ಮರುಹೊಂದಿಸುತ್ತಿದೆ. ಅಮೆಜಾನ್‌ನಂತಹ ಇತರ ತಂತ್ರಜ್ಞಾನ ಕಂಪನಿಗಳು ಅನುಸರಿಸಿದಂತೆಯೇ, ಒರಾಕಲ್ ಕೂಡ AI ತಂತ್ರಜ್ಞಾನಕ್ಕೆ ಆದ್ಯತೆ ನೀಡಲು ವೆಚ್ಚ ಕಡಿತದ ಮೊರೆ ಹೋಗಿದೆ. ಕೆಲಸ ಕಳೆದುಕೊಂಡ ನೌಕರರಿಗೆ ಪ್ರತಿ ವರ್ಷದ ಸೇವೆಗೆ 15 ದಿನಗಳ ಸಂಬಳ, ಒಂದು ತಿಂಗಳ ನೋಟಿಸ್ ಪೇ ಮತ್ತು ಎರಡು ತಿಂಗಳ ಹೆಚ್ಚುವರಿ ವೇತನವನ್ನು ಒಳಗೊಂಡ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಆದರೆ, ಮುಂದಿನ ಒಂದು ತಿಂಗಳೊಳಗೆ ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ನಡೆಯಬಹುದು ಎಂಬ ಆತಂಕವು ನೌಕರರಲ್ಲಿ ಮನೆಮಾಡಿದೆ.
ಇದನ್ನೂ ಓದಿ : ಐಪಿಎಲ್ ವೇಳೆಯೇ ದುರಂತ | ಹೋಟೆಲ್ ಕೊಠಡಿಯಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟ್ ಇಂಜಿನಿಯರ್ ಶವವಾಗಿ ಪತ್ತೆ!



















