ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹಲವರು ಪದಕದಿಂದ ವಂಚಿತರಾದರು ಪ್ರಭಲ ಹೋರಾಟ ನೀಡಿ ಸೋಲು ಕಂಡಿದ್ದಾರೆ. ಹಲವರು ಪದಕದ ಸಮೀಪ ಬಂದು ನಿಂತಿದ್ದಾರೆ. ಕಳೆದ ಬಾರಿ ಒಲಿಂಪಿಕ್ಸ್ ನ ಕಂಚು ಪದಕದ ವಿಜೇತೆ ಮತ್ತೊಂದು ಪದಕ್ಕೆ ಮುತ್ತಿಕ್ಕುವ ಸಮಯ ಹತ್ತಿರ ಬಂದಿದೆ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚು ವಿಜೇತ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಪ್ಯಾರಿಸ್ ಗೇಮ್ಸ್‌ನ ಮಹಿಳೆಯರ 75 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಖಚಿತಪಡಿಸಿಕೊಳ್ಳಲು ಅವರಿಗೆ ಇನ್ನೊಂದು ಗೆಲುವು ಬೇಕಿದೆ. ಅವರು ಬಾಕ್ಸಿಂಗ್ ನಲ್ಲಿ ಕ್ವಾರ್ಟರ್ ಫೈನಲ್ ಗೆದ್ದು ಸೆಮೀಸ್ ಪ್ರವೇಶಿಸಿದರೆ ಸಾಕು ಪದಕ ಖಚಿತವಾಗುತ್ತದೆ.
ಬುಧವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ನಾರ್ವೆಯ ಸುನ್ನಿವಾ ಹೊಫ್ಸ್ಟಾಡ್ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದರು. ಆ.4ರಂದು ನಡೆಯಲಿರುವ ಕ್ವಾರ್ಟರ್ ನಲ್ಲಿ ಲವ್ಲೀನಾಗೆ ಅಗ್ರ ಶ್ರೇಯಾಂಕಿತೆ ಚೀನಾದ ಲೀ ಕ್ವಿಯಾನ್ ಎದುರಾಳಿಯಾಗಿದ್ದಾರೆ.
ಭಾರತದ ಪದಕ ಭರವಸೆಗಳಲ್ಲಿ ಒಂದೆನಿಸಿರುವ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಗುರುವಾರ 3ನೇ ಶ್ರೇಯಾಂಕಿತ ಸ್ವಾತಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಸೆಣಸಾಟ ನಡೆಸಲಿದೆ. ಮಲೇಷ್ಯಾದ ಆ್ಯರೊನ್ ಚಿಯಾ ಹಾಗೂ ವೊಯೊ ಯಿಕ್ ಸೊ ಜೋಡಿ ಎದುರಾಗಲಿದೆ. ಕಳೆದ 3 ಮುಖಾಮುಖಿಗಳಲ್ಲಿಯೂ ಮಲೇಷ್ಯಾ ಜೋಡಿಯನ್ನು ಭಾರತೀಯ ಜೋಡಿ ಸೋಲಿಸಿದೆ.