ಬೆಂಗಳೂರು : ಕರ್ನಾಟಕ ಹೈಕೋರ್ಟ್ ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ಉತ್ತೇಜಿಸುವ ದಿಕ್ಕಿನಲ್ಲಿ ಮಹತ್ವದ ಹಾಗೂ ಐತಿಹಾಸಿಕ ತೀರ್ಪನ್ನು ನೀಡಿದೆ. 18ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ‘ಋತುಸ್ರಾವ ರಜೆ’ ನೀಡುವ ನೀತಿಯನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಮಹಿಳೆಯರ ಋತುಸ್ರಾವ ಆರೋಗ್ಯವು ಭಾರತೀಯ ಸಂವಿಧಾನದ 21ನೇ ವಿಧಿಯಡಿ ಬರುವ ಬದುಕುವ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇದು ಕೇವಲ ರಜೆ ನೀಡುವ ವಿಚಾರವಲ್ಲ, ಮಹಿಳೆಯರ ಘನತೆ ಮತ್ತು ಮೂಲಭೂತ ಹಕ್ಕುಗಳ ವಿಷಯ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಈ ರಜೆ ಸೌಲಭ್ಯವು ನೋಂದಾಯಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳಾ ನೌಕರರಿಗೆ ಅನ್ವಯವಾಗುತ್ತದೆ. ಶಾಶ್ವತ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಕೋರ್ಟ್ ಹೇಳಿದೆ. ಸಾಫ್ಟ್‌ವೇರ್ ಕಂಪನಿಗಳು ಮಾತ್ರವಲ್ಲದೆ, ಹೋಟೆಲ್ ಉದ್ಯೋಗಿಗಳು, ದಿನಗೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಮಹಿಳೆಯರಿಗೂ ಈ ಸೌಲಭ್ಯ ತಲುಪುವಂತೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಸೂಚಿಸಿದೆ.
ಪ್ರಸ್ತುತ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದರ ಜೊತೆಗೆ, ‘ಕರ್ನಾಟಕ ಋತುಸ್ರಾವ ರಜೆ ಮತ್ತು ನೈರ್ಮಲ್ಯ ವಿಧೇಯಕ-2025’ ಅನ್ನು ಶೀಘ್ರದಲ್ಲೇ ಕಾನೂನಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಮೂಡಲಗಿ ಪಟ್ಟಣದ ಹೋಟೆಲ್ ಉದ್ಯೋಗಿಯೊಬ್ಬರು ಋತುಸ್ರಾವ ರಜೆ ನೀಡದ ಬಗ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ಹೊರಬಂದಿದೆ. ಕೆಲವು ಉದ್ಯೋಗದಾತರ ಸಂಘಟನೆಗಳು ಈ ನೀತಿಗೆ ವಿರೋಧ ವ್ಯಕ್ತಪಡಿಸಿದರೂ, ಮಹಿಳೆಯರ ಜೈವಿಕ ಅಗತ್ಯತೆಗಳನ್ನು ಗೌರವಿಸುವುದು ಸಮಾನತೆಯ ಸಂಕೇತವಾಗಿದೆ ಎಂದು ಕೋರ್ಟ್ ಸ್ಪಷ್ಟ ಸಂದೇಶ ನೀಡಿದೆ.
ಇದನ್ನೂ ಓದಿ : ಬೀದರ್‌ನಲ್ಲಿ ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ!


















