ನೋಯ್ಡಾ: ಆರು ವರ್ಷದ ಮಗುವಿನ ತಾಯಿಯಾಗಿದ್ದ 28 ವರ್ಷದ ಮಹಿಳೆಯನ್ನು ಪ್ರೀತಿಯ ಬಲೆಗೆ ಬೀಳಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ್ದಲ್ಲದೇ, ನಕಲಿ ‘ನಿಖಾಹ್ ನಾಮ’ ಸೃಷ್ಟಿಸಿ ವಿವಾಹವಾದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಜಾ ಮಿಯಾನ್ ಅಲಿಯಾಸ್ ಎಹ್ಸಾನ್ ಸೇರಿದಂತೆ ಮೂವರನ್ನು ನೋಯ್ಡಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹೈಕೋರ್ಟ್ ಮೊರೆ ಹೋದ ತಾಯಿ
ತನ್ನ ಮಗಳನ್ನು ಪತ್ತೆಹಚ್ಚುವಂತೆ ಕೋರಿ ಸಂತ್ರಸ್ತೆಯ ತಾಯಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಹಿಳೆಯನ್ನು ಚೆನ್ನೈನಿಂದ ಪತ್ತೆಹಚ್ಚಿ ವಾಪಸ್ ಕರೆತಂದಿದ್ದಾರೆ.
ಏನಿದು ಪ್ರಕರಣ?
ಆರೋಪಿ ರಾಜಾ ಮಿಯಾನ್, ಸಂತ್ರಸ್ತೆಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದ. ನಂತರ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿಸಿ, ಆಕೆಯ ಹೆಸರನ್ನು ಬದಲಾಯಿಸಿದ್ದಾನೆ. ಅಷ್ಟೇ ಅಲ್ಲದೆ, ನಕಲಿ ದಾಖಲೆಗಳನ್ನು ಬಳಸಿ ‘ನಿಖಾಹ್’ (ಇಸ್ಲಾಮಿಕ್ ವಿವಾಹ) ಮಾಡಿಕೊಂಡಿದ್ದಾನೆ. ಕಾನೂನುಬದ್ಧವಾಗಿ ಸಂತ್ರಸ್ತೆಯು ತನ್ನ ಮೊದಲ ಪತಿಗೆ ಇನ್ನೂ ವಿಚ್ಛೇದನ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪರಾಧದಲ್ಲಿ ರಾಜಾ ಮಿಯಾನ್‌ನ ಕುಟುಂಬವೂ ಸಕ್ರಿಯವಾಗಿ ಭಾಗಿಯಾಗಿದೆ. ಆತನ ತಾಯಿ ಸಂತ್ರಸ್ತೆಯ ಚಿಕ್ಕಮ್ಮನಂತೆ ಹಾಗೂ ಆತನ ಸಹೋದರ ಸಂತ್ರಸ್ತೆಯ ಅಣ್ಣನಂತೆ ನಟಿಸಿ ವಿವಾಹಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸ್ಥಳೀಯ ಮೌಲ್ವಿಯೊಬ್ಬರು ನಕಲಿ ‘ನಿಖಾಹ್ ನಾಮ’ (ವಿವಾಹ ಒಪ್ಪಂದ) ಸಿದ್ಧಪಡಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ರಾಜಾ ಮಿಯಾನ್, ಆತನ ತಂದೆ, ತಾಯಿ, ಸಹೋದರ ಮತ್ತು ಮೌಲ್ವಿ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ರಾಜಾ ಮಿಯಾನ್, ಆತನ ತಂದೆ ಮತ್ತು ತಾಯಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಸಹೋದರ ಮತ್ತು ಮೌಲ್ವಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.