ನವದೆಹಲಿ: ಭಾರತ ಮತ್ತು ಪಾಕ್ ಯುದ್ಧ ನಿಲ್ಲಿಸಿದ್ದ ನಾನೇ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪದೇ ಪದೇ ಹೇಳಿಕೆ ನೀಡುತ್ತಿರುವಂತೆಯೇ, ಚೀನಾ ಕೂಡ ಈಗ ಇದೇ ಹೇಳಿಕೆಯನ್ನು ನೀಡಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಆರಂಭವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ವೇಳೆ ಶಾಂತಿ ಸ್ಥಾಪಿಸುವಲ್ಲಿ ತಾನು ಮಧ್ಯಸ್ಥಿಕೆ ವಹಿಸಿರುವುದಾಗಿ ಚೀನಾ ಹೇಳಿಕೊಂಡಿದೆ. ಆದರೆ, ಚೀನಾದ ಈ ವಾದವನ್ನು ಭಾರತ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದ್ದು, ಇದರಲ್ಲಿ ಯಾವುದೇ ಮೂರನೇ ದೇಶದ ಹಸ್ತಕ್ಷೇಪವಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಇದೀಗ ಅವರ ಮಾತನ್ನೇ ಪ್ರತಿಧ್ವನಿಸಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ಶ್ರೇಯಸ್ಸನ್ನು ಪಡೆಯಲು ಯತ್ನಿಸಿದ್ದಾರೆ.
ಭಾರತದ ಸ್ಪಷ್ಟನೆ ಏನು?
“ಮಧ್ಯಸ್ಥಿಕೆಯ ಬಗ್ಗೆ ಭಾರತದ ನಿಲುವು ಯಾವಾಗಲೂ ಸ್ಪಷ್ಟವಾಗಿದೆ. ‘ಆಪರೇಷನ್ ಸಿಂದೂರ’ ನಂತರ ನಡೆದ ಬೆಳವಣಿಗೆಯಲ್ಲಿ ಯಾವುದೇ ಹೊರಗಿನವರ ಮಧ್ಯಸ್ಥಿಕೆ ಇರಲಿಲ್ಲ. ಪಾಕಿಸ್ತಾನವೇ ಸ್ವತಃ ಭಾರತದ ಡಿಜಿಎಂಒ (ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರು) ಅವರನ್ನು ಸಂಪರ್ಕಿಸಿ ಕದನ ವಿರಾಮಕ್ಕೆ ಮನವಿ ಮಾಡಿತ್ತು,” ಎಂದು ಭಾರತ ಸ್ಪಷ್ಟಪಡಿಸಿದೆ.
ಮೇ 10, 2025 ರಂದು ಮಧ್ಯಾಹ್ನ ಉಭಯ ದೇಶಗಳ ಡಿಜಿಎಂಒಗಳ ನಡುವೆ ನಡೆದ ಫೋನ್ ಕರೆಯ ಮೂಲಕ ಕದನ ವಿರಾಮದ ದಿನಾಂಕ ಮತ್ತು ಸಮಯವನ್ನು ನಿರ್ಧರಿಸಲಾಗಿತ್ತೇ ಹೊರತು, ಬೇರೆ ಯಾವುದೇ ದೇಶ ಇದರಲ್ಲಿ ಭಾಗಿಯಾಗಿರಲಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಚೀನಾ ಹೇಳಿದ್ದೇನು?
ಬೀಜಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, “ಎರಡನೇ ಮಹಾಯುದ್ಧದ ನಂತರ ಇದೇ ಮೊದಲ ಬಾರಿಗೆ ಸ್ಥಳೀಯ ಯುದ್ಧಗಳು ಮತ್ತು ಗಡಿ ಸಂಘರ್ಷಗಳು ಹೆಚ್ಚಾಗಿವೆ. ಈ ಸಂಕಷ್ಟದ ಸಮಯದಲ್ಲಿ ಚೀನಾ ವಸ್ತುನಿಷ್ಠ ನಿಲುವು ತಳೆದು, ಮ್ಯಾನ್ಮಾರ್, ಇರಾನ್ ಪರಮಾಣು ಸಮಸ್ಯೆ, ಭಾರತ-ಪಾಕಿಸ್ತಾನ ಉದ್ವಿಗ್ನತೆ ಸೇರಿದಂತೆ ಹಲವು ಕಡೆ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿದೆ,” ಎಂದು ಹೇಳಿಕೊಂಡಿದ್ದರು.
ಚೀನಾದ ರಹಸ್ಯ ಅಜೆಂಡಾ:
ಇನ್ನೊಂದೆಡೆ, ಮೇ ತಿಂಗಳಲ್ಲಿ ನಡೆದ ಭಾರತ-ಪಾಕ್ ಸಂಘರ್ಷವನ್ನು ಚೀನಾ ತನ್ನ ಲಾಭಕ್ಕೆ ಬಳಸಿಕೊಂಡಿದೆ ಎಂದು ಅಮೆರಿಕದ ಆಯೋಗವೊಂದು ಇತ್ತೀಚೆಗೆ ವರದಿ ಮಾಡಿತ್ತು.ಮೇ 7 ರಿಂದ 10 ರವರೆಗೆ ನಡೆದ ಸಂಘರ್ಷದ ವೇಳೆ, ಚೀನಾ ಪಾಕಿಸ್ತಾನಕ್ಕೆ ಪೂರೈಸಿದ್ದ ತನ್ನ ಆಧುನಿಕ ಶಸ್ತ್ರಾಸ್ತ್ರಗಳಾದ ಎಚ್‌ಕ್ಯೂ-9 ವಾಯು ರಕ್ಷಣಾ ವ್ಯವಸ್ಥೆ ಮತ್ತು ಜೆ-10 ಫೈಟರ್ ಜೆಟ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಯುದ್ಧವನ್ನು ವೇದಿಕೆಯನ್ನಾಗಿ ಬಳಸಿಕೊಂಡಿತು ಎಂದು ವರದಿ ಆರೋಪಿಸಿತ್ತು.
ಇದನ್ನೂ ಓದಿ; ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ಯತ್ನ | ಪ್ರಧಾನಿ ಮೋದಿ ಕಳವಳ



















