ನವದೆಹಲಿ: ಇರಾನ್‌ನಲ್ಲಿ ಆಯತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆ ಮತ್ತು ಉದ್ವಿಗ್ನ ಪರಿಸ್ಥಿತಿಯ ನಡುವೆ ಸಿಲುಕಿದ್ದ ಭಾರತೀಯರ ಮೊದಲ ತಂಡವು ಇಂದು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದೆ. ಶುಕ್ರವಾರ ತಡರಾತ್ರಿ ಇರಾನ್‌ನಿಂದ ಹೊರಟ ಎರಡು ವಾಣಿಜ್ಯ ವಿಮಾನಗಳು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯರನ್ನು ಅವರ ಕುಟುಂಬಸ್ಥರು ಭಾವುಕರಾಗಿ ಸ್ವಾಗತಿಸಿದರು. ಇರಾನ್‌ನಲ್ಲಿ ಅಂತರ್ಜಾಲ ಸಂಪರ್ಕ ಕಡಿತಗೊಂಡಿದ್ದರಿಂದ ಕಳೆದ ಕೆಲವು ದಿನಗಳಿಂದ ತಮ್ಮವರನ್ನು ಸಂಪರ್ಕಿಸಲು ಸಾಧ್ಯವಾಗದೆ ಆತಂಕದಲ್ಲಿದ್ದ ಕುಟುಂಬಸ್ಥರು, ಇದೀಗ ತಮ್ಮ ಪ್ರೀತಿಪಾತ್ರರನ್ನು ಕಾಣುತ್ತಿದ್ದಂತೆಯೇ ನಿಟ್ಟುಸಿರು ಬಿಟ್ಟಿದ್ದಾರೆ.
ಇರಾನ್ ಭೀಕರ ಪರಿಸ್ಥಿತಿಯನ್ನು ಬಿಚ್ಚಿಟ್ಟರು
ಮರಳಿ ಬಂದ ಭಾರತೀಯರು ಇರಾನ್‌ನಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. “ಅಲ್ಲಿನ ಪರಿಸ್ಥಿತಿ ನಿಜಕ್ಕೂ ಭಯಾನಕವಾಗಿದೆ. ರಸ್ತೆಗಳಲ್ಲಿ ಬೆಂಕಿ ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಕಳೆದ ಎರಡು ವಾರಗಳಿಂದ ಅಂತರ್ಜಾಲ ಸಂಪರ್ಕ ಇಲ್ಲದ ಕಾರಣ ನಮ್ಮ ಕುಟುಂಬದವರನ್ನು ಸಂಪರ್ಕಿಸಲು ಅಥವಾ ಭಾರತೀಯ ರಾಯಭಾರ ಕಚೇರಿಯನ್ನು ಸಂವಹನ ನಡೆಸಲು ಸಾಧ್ಯವಾಗಲಿಲ್ಲ” ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಕೇವಲ ಆಡಳಿತಾರೂಢ ಸರ್ಕಾರದ ಬೆಂಬಲಿಗರು ಮಾತ್ರವಲ್ಲದೆ, ಆಡಳಿತ ವಿರೋಧಿ ಪ್ರತಿಭಟನಾಕಾರರು ಕಾರುಗಳನ್ನು ತಡೆದು ತೊಂದರೆ ನೀಡುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.
ರಾಯಭಾರ ಕಚೇರಿಯ ನೆರವಿಗೆ ಶ್ಲಾಘನೆ
ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂಕಷ್ಟದ ಸಮಯದಲ್ಲಿ ಸತತವಾಗಿ ಸಂಪರ್ಕದಲ್ಲಿದ್ದು, ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದೆ. ಇದಕ್ಕಾಗಿ ಧನ್ಯವಾದ ಅರ್ಪಿಸುತ್ತೇವೆ ಎಂದು ಇರಾನ್ ನಿಂದ ಮರಳಿದ ಭಾರತೀಯರು ಹೇಳಿದ್ದಾರೆ. ಪ್ರವಾಸಕ್ಕೆ ಹೋಗಿದ್ದ ಭಕ್ತಾದಿಗಳು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ತಾಯ್ನಾಡಿಗೆ ಮರಳಲು ಭಾರತ ಸರ್ಕಾರವು ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದನ್ನು ಅವರು ಸ್ಮರಿಸಿದ್ದಾರೆ. “ಮೋದಿ ಸರ್ಕಾರ ಇರುವುದರಿಂದ ನಾವು ಸುರಕ್ಷಿತವಾಗಿ ಮರಳಲು ಸಾಧ್ಯವಾಯಿತು” ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರದ ಸೂಚನೆ
ಇರಾನ್‌ನಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲದ ಕಾರಣ, ಅನಿವಾರ್ಯವಲ್ಲದ ಹೊರತು ಇರಾನ್ ಪ್ರವಾಸ ಮಾಡದಂತೆ ಭಾರತ ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿದೆ. ಇರಾನ್‌ನಲ್ಲಿ ಸುಮಾರು 9,000ಕ್ಕೂ ಹೆಚ್ಚು ಭಾರತೀಯರಿದ್ದು, ಅವರ ಸುರಕ್ಷತೆಯ ಮೇಲೆ ವಿದೇಶಾಂಗ ಸಚಿವಾಲಯವು ನಿರಂತರ ನಿಗಾ ವಹಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಭಾರತೀಯರು ಪ್ರತಿಭಟನಾ ಸ್ಥಳಗಳಿಂದ ದೂರವಿರಲು ಸೂಚಿಸಲಾಗಿದೆ.
ಇದನ್ನೂ ಓದಿ: ಮೆಟ್ರೋ ದರ ಏರಿಕೆ ತಡೆಗೆ ಸರ್ಕಾರಕ್ಕೆ ತೇಜಸ್ವಿ ಸೂರ್ಯ ಆಗ್ರಹ!



















