ಬೆಂಗಳೂರು: ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸಂದರ್ಭಗಳಲ್ಲಿ ಸಹಾಯವಾಗಲಿ ಎಂದು ಆರೋಗ್ಯ ವಿಮೆ ಮಾಡಿಸಿರುತ್ತೇವೆ. ಅದರಲ್ಲೂ, ಕ್ಯಾಶ್ ಲೆಸ್ ಚಿಕಿತ್ಸೆಯ ಸೌಲಭ್ಯವು ವಿಮಾದಾರರಿಗೆ ಅನುಕೂಲವಾಗುತ್ತದೆ. ಆದರೆ, ದೇಶದ ಸಾವಿರಾರು ಆಸ್ಪತ್ರೆಗಳಲ್ಲಿ ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಹೋಲ್ಡರ್ ಗಳಿಗೆ ಸೆಪ್ಟೆಂಬರ್ 1ರಿಂದ ಕ್ಯಾಶ್ ಲೆಸ್ ಚಿಕಿತ್ಸೆಯನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿದೆ. ಇದರಿಂದ ಪಾಲಿಸಿದಾರರು ಭೀತಿಗೊಳಗಾಗಿದ್ದಾರೆ.
ಹೌದು, ಭಾರತದ ಆರೋಗ್ಯ ವಿಮಾ ಸೇವಾದಾರ ಕಂಪನಿಗಳ ಸಂಸ್ಥೆ (ಎಎಚ್ ಪಿಐ)ಯು ಈ ಆದೇಶ ಹೊರಡಿಸಿದೆ. ಹಾಗಾಗಿ, ದೇಶದ 15-20 ಸಾವಿರ ಆಸ್ಪತ್ರೆಗಳಲ್ಲಿ ಕ್ಯಾಶ್ ಲೆಸ್ ಚಿಕಿತ್ಸೆ ಲಭ್ಯವಿರುವುದಿಲ್ಲ. ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿದಾರರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಅಂದರೆ, ಪಾಲಿಸಿದಾರರು ಚಿಕಿತ್ಸೆಗಾಗಿ ಆಸ್ಪತ್ರೆಗೆ ನೇರವಾಗಿ ಹಣ ಪಾವತಿಸಬೇಕಾಗುತ್ತದೆ. ನಂತರ, ಆ ರಶೀದಿಗಳನ್ನು ಸಂಗ್ರಹಿಸಿ ತಮ್ಮ ವಿಮಾ ಕಂಪನಿಯಿಂದ ಭರ್ತಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ.
ಇದುವರೆಗೆ ಲಭಿಸಿದ ಮಾಹಿತಿಯ ಪ್ರಕಾರ, ಎ ಎಚ್ ಪಿ ಐ ನೀಡಿರುವ ಆದೇಶ ಕೇವಲ ಉತ್ತರ ಭಾರತದಲ್ಲಿ ಮಾತ್ರ ಜಾರಿಗೆ ಬರಲಿದೆ. ಸೂಚನೆಯಲ್ಲಿ ದಕ್ಷಿಣ ಭಾರತ ಎಂದೇನೂ ಉಲ್ಲೇಖವಾಗಿಲ್ಲ. ಆ ಬಗ್ಗೆ ಎಎಚ್ ಪಿಐ ವತಿಯಿಂದ ಸ್ಪಷ್ಟನೆಯೂ ಬಂದಿಲ್ಲ. ಆದರೆ, ಈಗ ಹೊರಬಿದ್ದಿರುವ ಆದೇಶದ ಪ್ರಕಾರ, ಈ ಆದೇಶ ಉತ್ತರ ಭಾರತದಲ್ಲಿ ಮಾತ್ರ ಸೆ. 1ರಿಂದ ಜಾರಿಯಾಗಲಿದೆ.
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಮತ್ತು ಆಂಧ್ರ ಪ್ರದೇಶ, ತೆಲಂಗಾಣದ ಆಸ್ಪತ್ರೆಗಳ ಮೇಲೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ವರದಿಯಾಗಿದೆ. ಎಎಚ್ ಪಿಐ ನೆಟ್ ವರ್ಕ್ ದೇಶದ ಅತ್ಯಂತ ದೊಡ್ಡ ಆರೋಗ್ಯ ಸೇವಾ ನೆಟ್ ವರ್ಕ್ ಗಳಲ್ಲಿ ಒಂದಾಗಿದೆ. ಇದರಲ್ಲಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ, ಫೋರ್ಟಿಸ್ ಎಸ್ಕಾರ್ಟ್ಸ್, ಮೆಡಿಕ್ಯೂರ್, ಅಪೋಲೋ ಸೇರಿ ಖ್ಯಾತ ಖಾಸಗಿ ಆಸ್ಪತ್ರೆಗಳ ಜತೆ ಟೈ ಅಪ್ ಇದೆ.