ಪ್ರಾಥಮಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ, B.Ed ಅರ್ಹತೆ ಹೊಂದಿರುವ ಶಿಕ್ಷಕರಿಗೆ ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ (NIOS) ಗುಡ್ ನ್ಯೂಸ್ ನೀಡಿದೆ. 6 ತಿಂಗಳ ಸರ್ಟಿಫಿಕೇಟ್ ಬ್ರಿಡ್ಜ್ ಕೋರ್ಸ್ ಗೆ ನೋಂದಾಯಿಸಿಕೊಳ್ಳಲು ಎನ್ಐಒಎಸ್ ಮತ್ತೊಂದು ಸುವರ್ಣಾವಕಾಶ ಕಲ್ಪಿಸಿದೆ. ಈವರೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗದ ಅರ್ಹ ಶಿಕ್ಷಕರು ಅಕ್ಟೋಬರ್ 28ರೊಳಗೆ ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಕಾರಿ ಶಿಕ್ಷಕರು ಸೇರಿದಂತೆ ಹಲವು ಪಾಲುದಾರರು ನೋಂದಣಿ ಪೋರ್ಟಲ್ ಅನ್ನು ಪುನಃ ತೆರೆಯುವಂತೆ ಎನ್ಐಒಎಸ್ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಗಳನ್ನು ಪರಿಗಣಿಸಿ, ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಪೋರ್ಟಲ್ ತೆರೆಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 21 ರಿಂದ ಆರಂಭವಾಗಿದ್ದು, ಅಕ್ಟೋಬರ್ 28 ರವರೆಗೆ ಮುಂದುವರಿಯಲಿದೆ. ಇದಾದ ನಂತರ ನೋಂದಣಿ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಎಂದು ಎನ್ಐಒಎಸ್ ಸ್ಪಷ್ಟಪಡಿಸಿದೆ. ಆದ್ದರಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ಅರ್ಹ ಪ್ರಾಥಮಿಕ ಶಿಕ್ಷಕರು ತಕ್ಷಣವೇ ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
• ಆಸಕ್ತರು ಅಧಿಕೃತ ಎನ್ಐಒಎಸ್ ವೆಬ್ ಸೈಟ್ bridge.nios.ac.in ಗೆ ಭೇಟಿ ನೀಡಿ.
• ಮುಖಪುಟದಲ್ಲಿರುವ Register Now ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಸೂಚನೆಗಳನ್ನು ಓದಿ.
• ನಿಮ್ಮ ಮೂಲಭೂತ ವಿವರಗಳು, ವೈಯಕ್ತಿಕ ಹಾಗೂ ವೃತ್ತಿಪರ ಮಾಹಿತಿಯನ್ನು ತಪ್ಪಿಲ್ಲದೆ ಭರ್ತಿ ಮಾಡಿ.
• ಅಗತ್ಯವಿರುವ ದಾಖಲೆಗಳನ್ನು ಅಪ್ ಲೋಡ್ ಮಾಡಿ, ನಿಗದಿತ ಶುಲ್ಕ ಪಾವತಿಸಿ. ನಂತರ Submit ಮೇಲೆ ಕ್ಲಿಕ್ ಮಾಡಿ.
• ಪ್ರಕ್ರಿಯೆ ಪೂರ್ಣಗೊಂಡ ನಂತರ ದೃಢೀಕರಣ ಪುಟವನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಇದನ್ನೂ ಓದಿ:ದೀಪಾವಳಿಗೆ ಮುನ್ನವೇ ಕೇಂದ್ರದಿಂದ ರೈತರ ಖಾತೆಗೆ 2 ಸಾವಿರ ರೂ. ಜಮೆ? ಇಲ್ಲಿದೆ ಅಪ್ಡೇಟ್



















