ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ಮೊದಲ ಟೆಸ್ಟ್ ನಡೆಯುತ್ತಿದೆ. ನ್ಯೂಜಿಲೆಂಡ್ ತಂಡವು ಭಾರತ ತಂಡದ ಮೇಲೆ ಬಿಗಿ ಹಿಡಿತ ಸಾಧಿಸಿದೆ.
ಪಂದ್ಯದ ಎರಡನೇ ದಿನದಲ್ಲಿ ನ್ಯೂಜಿಲೆಂಡ್ ತಂಡವು ಭಾರತವನ್ನು ಕೇವಲ 46 ರನ್ ಗಳಿಗೆ ಆಲೌಟ್ ಮಾಡಿದೆ. ಅಲ್ಲದೇ, ಬ್ಯಾಟಿಂಗ್ ಮುಂದುವರೆಸಿರುವ ನ್ಯೂಜಿಲೆಂಡ್ ತಂಡ ದಿನದದಾಟದಂತ್ಯಕ್ಕೆ ಕೇವಲ 3 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 134 ರನ್ಗಳ ಮುನ್ನಡೆ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ 22 ರನ್ ಹಾಗೂ ಡೆರಿಲ್ ಮಿಚೆಲ್ 14 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಮೊದಲ ದಿನದಾಟ ಮಳೆಯಿಂದಾಗಿ ಟಾಸ್ ಇಲ್ಲದೇ ಕೊನೆಗೊಂಡಿತು. ಹೀಗಾಗಿ ಎರಡನೇ ದಿನ ಪಂದ್ಯವನ್ನು 15 ನಿಮಿಷ ಮುಂಚಿತವಾಗಿ ಆರಂಭಿಸಲಾಯಿತು. ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಕಿವೀಸ್ ಮಾತ್ರ ಭಾರತದ ಮೇಲೆ ದಾಳಿ ಮಾಡಲು ಆರಂಭಿಸಿತು. ಕಿವೀಸ್ ದಾಳಿಗೆ ತತ್ತರಿಸಿದ ಭಾರತದ ಬ್ಯಾಟಿಂಗ್ ಕ್ರಮಾಂಕ ಪೆವಿಲಿಯನ್ ಪರೇಡ್ ನಡೆಸಿತು. ತಂಡದ 11 ಆಟಗಾರರು ಸೇರಿ ಕೇವಲ 50 ರನ್ ಗಳಿಸಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಭಾರತಕ್ಕೆ ಉತ್ತಮ ಪ್ರದರ್ಶನ ತೋರಲು ಆಗಲಿಲ್ಲ.
ನ್ಯೂಜಿಲೆಂಡ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಟಾಮ್ ಲೇಥಮ್ ಹಾಗೂ ಡೆವೋನ್ ಕಾನ್ವೇ ಮೊದಲ ವಿಕೆಟ್ಗೆ 67 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ 15 ರನ್ ಗಳಿಸಿ ಆಡುತ್ತಿದ್ದ ನಾಯಕ ಲೇಥಮ್ ರನ್ನು ಕುಲ್ದೀಪ್ ಯಾದವ್ ಬಲಿ ಪಡೆದರು.
ವಿಲ್ ಯಂಗ್ ಜೊತೆಗೆ ಕಾನ್ವೇ ಇನ್ನಿಂಗ್ಸ್ ನಿಭಾಯಿಸಿದರು. ಜಡೇಜಾ, 33 ರನ್ ಗಳಿಸಿ ಆಡುತ್ತಿದ್ದ ವಿಲ್ ಯಂಗ್ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಶತಕದತ್ತ ಸಾಗುತ್ತಿದ್ದ ಕಾನ್ವೇ ಅವರನ್ನು ಬೌಲ್ಡ್ ಮಾಡಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತಕ್ಕೆ ಮೂರನೇ ಯಶಸ್ಸನ್ನು ತಂದುಕೊಟ್ಟು ಕಾನ್ವೇ ಶತಕ ಗಳಿಸದಂತೆ ತಡೆದರು.