ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 28 ರಂದು ನಡೆಯಲಿದ್ದು, ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ಇದರ ಪೂರ್ವಭಾವಿಯಾಗಿ, ಇಂದು (ಶನಿವಾರ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ಪ್ರಮುಖರು
ಹಾಲಿ ಅಧ್ಯಕ್ಷ ರೋಜರ್ ಬಿನ್ನಿ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ತೆರವಾಗುವ ಸ್ಥಾನಕ್ಕೆ ಹಲವು ಪ್ರಮುಖರ ಹೆಸರುಗಳು ಕೇಳಿಬರುತ್ತಿವೆ. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಮತ್ತೆ ಈ ಸ್ಥಾನಕ್ಕೆ ನೇಮಕ ಮಾಡುವ ಸಾಧ್ಯತೆಗಳು ದಟ್ಟವಾಗಿವೆ. 2022ರಲ್ಲಿ ನಡೆದ ಬೆಳವಣಿಗೆಯಲ್ಲಿ ಗಂಗೂಲಿ ಅವರ ಸ್ಥಾನಕ್ಕೆ ರೋಜರ್ ಬಿನ್ನಿ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಮತ್ತೆ ಗಂಗೂಲಿ ಅವರೇ ಅಧ್ಯಕ್ಷರಾಗುವ ಬಗ್ಗೆ ಬಲವಾದ ಚರ್ಚೆಗಳು ನಡೆಯುತ್ತಿವೆ. ಇವರೊಂದಿಗೆ ಮಾಜಿ ಕ್ರಿಕೆಟಿಗರಾದ ಕಿರಣ್ ಮೋರೆ, ಹರ್ಭಜನ್ ಸಿಂಗ್ ಹಾಗೂ ಕರ್ನಾಟಕದ ರಘುರಾಮ್ ಭಟ್ ಅವರ ಹೆಸರುಗಳೂ ಸಹ ರೇಸ್‌ನಲ್ಲಿವೆ ಎಂದು ಮೂಲಗಳು ತಿಳಿಸಿವೆ.
ವಿವಿಧ ಆಯ್ಕೆ ಸಮಿತಿಗಳಿಗೂ ನೇಮಕ
ಸೆಪ್ಟೆಂಬರ್ 28ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರ ಆಯ್ಕೆಯ ಜೊತೆಗೆ, ವಿವಿಧ ಸಮಿತಿಗಳಿಗೂ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಅಜಿತ್ ಅಗರ್ಕರ್ ನೇತೃತ್ವದ ಪುರುಷರ ರಾಷ್ಟ್ರೀಯ ಆಯ್ಕೆ ಸಮಿತಿಗೆ ಇಬ್ಬರು ಸದಸ್ಯರು, ರಾಷ್ಟ್ರೀಯ ಜೂನಿಯರ್ ಸಮಿತಿಗೆ ಒಬ್ಬರು ಹಾಗೂ ರಾಷ್ಟ್ರೀಯ ಮಹಿಳಾ ಸಮಿತಿಗೆ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಈ ಹೊಸ ಆಯ್ಕೆಗಾರರು ಸಭೆಯ ನಂತರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.



















