ಲೇಹ್: ಪೂರ್ವ ಲಡಾಕ್ ನಲ್ಲಿ ಆಗಾಗ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ, ಆಕ್ರಮಣಕಾರಿ ನೀತಿಗಳ ಮೂಲಕ ಸಂಘರ್ಷ ಸೃಷ್ಟಿಸುವ ಚೀನಾಗೆ ಭಾರತ ತಿರುಗೇಟು ನೀಡಲು ಸಜ್ಜಾಗುತ್ತಿದೆ. ಪೂರ್ವ ಲಡಾಕ್ ನಲ್ಲಿ (Eastern Ladakh) ಹೆಚ್ಚಿನ ಸುರಕ್ಷತೆ, ನಿಗಾ ಇರಿಸಲು ಹೊಸದೊಂದು ಸೇನಾ ವಿಭಾಗವನ್ನು ರಚಿಸಲು ಭಾರತೀಯ ಸೇನೆ ಸಿದ್ಧತೆ ನಡೆಸುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿವೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಹೊಸ ಸೇನಾ ವಿಭಾಗವನ್ನು 72 ಡಿವಿಷನ್ ಎಂದು ಕರೆಯಲಾಗುತ್ತದೆ. ಸೇನೆಯಲ್ಲಿ ಒಂದು ವಿಭಾಗ ಎಂದರೆ 10-15 ಸಾವಿರ ಸೈನಿಕರಿರುತ್ತಾರೆ. ಇದನ್ನು ಒಬ್ಬ ಮೇಜರ್ ಜನರಲ್ ಮುನ್ನಡೆಸುತ್ತಾರೆ. 3-4 ಬ್ರಿಗೇಡಿಯರ್ ಕಮಾಂಡ್ ಗಳನ್ನು ಡಿವಿಷನ್ ಒಳಗೊಂಡಿರುತ್ತದೆ. ಪೂರ್ವ ಲಡಾಕ್ ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಸುರಕ್ಷತೆಯನ್ನು ಇವರು ದೃಢಪಡಿಸುತ್ತಾರೆ. 2020ರ ಮೇ ತಿಂಗಳಲ್ಲಿ ಪೂರ್ವ ಲಡಾಕ್ ನಲ್ಲಿ ಚೀನಾ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಸಂಘರ್ಷ ಸೃಷ್ಟಿಸಿತ್ತು. ಇದಾದ ಬಳಿಕ ಸೈನಿಕರ ವಾಪಸಾತಿಗಾಗಿ ಭಾರತ-ಚೀನಾ ಒಪ್ಪಂದ ಮಾಡಿಕೊಂಡಿವೆ.
ಪೂರ್ವ ಲಡಾಕ್ ನಲ್ಲಿ ಸುರಕ್ಷತೆಗಾಗಿ ಭಾರತೀಯ ಸೇನೆ ಹಲವು ಕ್ರಮ ತೆಗೆದುಕೊಳ್ಳಲಿದೆ. ಪೂರ್ವ ಲಡಾಕ್ ನಲ್ಲಿ ಪ್ರಧಾನ ಕಚೇರಿಯನ್ನು ನಿರ್ಮಿಸಲಾಗುತ್ತಿದೆ. ಒಂದು ಬ್ರಿಗೇಡ್ ಪ್ರಧಾನ ಕಚೇರಿಯನ್ನು ಈಗಾಗಲೇ ಪೂರ್ವ ಲಡಾಖ್ನಲ್ಲಿ ನಿಯೋಜಿಸಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ನಿರ್ದಿಷ್ಟ ಕಾರ್ಯದ ಪ್ರಕಾರ ಸಿಬ್ಬಂದಿ, ಉಪಕರಣಗಳು ಮತ್ತು ಸಂಘಟನೆಯನ್ನು ಹೊಂದಾಣಿಕೆ ಮಾಡಲು ದೇಶದ ಪಶ್ಚಿಮ ಭಾಗಗಳಲ್ಲಿ ರಚನೆಯ ದೊಡ್ಡ ಘಟಕಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
72 ನೇ ವಿಭಾಗವನ್ನು ಶಾಶ್ವತವಾಗಿ ಲೇಹ್ ಮೂಲದ 14 ಫೈರ್ & ಫ್ಯೂರಿ ಕಾರ್ಪ್ಸ್ ಅಡಿಯಲ್ಲಿ ಇರಿಸಲಾಗುತ್ತದೆ. ಇದನ್ನು ಕಾರ್ಗಿಲ್ ಯುದ್ಧದ ನಂತರ 1999ರ ಸೆಪ್ಟೆಂಬರ್ ತಿಂಗಳಲ್ಲಿ ಸ್ಥಾಪಿಸಲಾಯಿತು. ಈ ಕಾರ್ಪ್ಸ್ ವಿಶ್ವದ ಅತ್ಯಂತ ಸೂಕ್ಷ್ಮ ಗಡಿನಾಡುಗಳು ಮತ್ತು ಯುದ್ಧಭೂಮಿಗಳನ್ನು ನಿರ್ವಹಿಸುತ್ತದೆ. 72 ನೇ ವಿಭಾಗದ ನಿಯಂತ್ರಣದಲ್ಲಿರುವ ಪ್ರದೇಶವನ್ನು ಪ್ರಸ್ತುತ ಯೂನಿಫಾರ್ಮ್ ಫೋರ್ಸ್ ಎಂದು ಕರೆಯಲ್ಪಡುವ ದಂಗೆ ನಿಗ್ರಹ ವಿಭಾಗ ನೋಡಿಕೊಳ್ಳುತ್ತಿದೆ. ಯೂನಿಫಾರ್ಮ್ ಫೋರ್ಸ್ ಶೀಘ್ರದಲ್ಲೇ ಜಮ್ಮು ವಿಭಾಗದ ರಿಯಾಸಿಯಲ್ಲಿರುವ ತನ್ನ ಹಳೆಯ ಸ್ಥಳಕ್ಕೆ ಹಿಂತಿರುಗಲಿದೆ. 832-ಕಿಮೀ ಗಡಿ ವಾಸ್ತವ ರೇಖೆ ಉದ್ದಕ್ಕೂ ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಪೂರ್ವ ಲಡಾಖ್ ನಲ್ಲಿ ಶಾಶ್ವತ ವಿಭಾಗವನ್ನು ರಚಿಸುವ ಸೇನೆಯ ನಿರ್ಧಾರವು ಮುಖ್ಯವಾಗಿದೆ.