ಕೋಲ್ಕತ್ತಾ: ದೇಶಾದ್ಯಂತ ಮಾಂಸಾಹಾರವನ್ನು ನಿಷೇಧಿಸಬೇಕು ಎಂದು ಬಾಲಿವುಡ್ ಹಿರಿಯ ನಟ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಶತ್ರುಘ್ನ ಸಿನ್ಹಾ ಆಗ್ರಹಿಸಿದ್ದಾರೆ. ಜೊತೆಗೆ ಉತ್ತರಾಖಂಡದಲ್ಲಿ ಜಾರಿಯಾಗಿರುವ ಏಕರೂಪ ನಾಗರಿಕ ಸಂಹಿತೆ (Uniform Civil Code – UCC)ಯನ್ನು ಪ್ರಶಂಸಿಸಿದ್ದಾರೆ.
ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಬಹುತೇಕ ರಾಜ್ಯಗಳಲ್ಲಿ ಬೀಫ್ (ಗೋಮಾಂಸ) ನಿಷೇಧಿಸಲಾಗಿದೆ. ನನ್ನ ಅಭಿಪ್ರಾಯದಲ್ಲಿ, ಕೇವಲ ಬೀಫ್ ಮಾತ್ರವಲ್ಲ, ಎಲ್ಲ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಆದರೆ, ದೇಶದಲ್ಲಿ ಪ್ರಾದೇಶಿಕ ಭಿನ್ನತೆಗಳು ಇರುವ ಕಾರಣ ಇಂತಹ ನಿರ್ಧಾರ ಕೈಗೊಳ್ಳುವುದು ಸವಾಲಿನ ಕೆಲಸವಾಗಿದೆ.
ಈಶಾನ್ಯ ಭಾರತದಲ್ಲಿ ಬೀಫ್ ತಿನ್ನುವುದು ಕಾನೂನುಬದ್ಧವಾಗಿದ್ದರೂ ಉತ್ತರ ಭಾರತದಲ್ಲಿ ಇದು ಸ್ವೀಕಾರಾರ್ಹವಲ್ಲ. ಈಶಾನ್ಯ ಭಾರತದಲ್ಲಿ ತಿನ್ನುವುದಾದರೆ ರುಚಿ, ಆದರೆ ಉತ್ತರ ಭಾರತದಲ್ಲಿ ತಿನ್ನುವುದಾದರೆ ಗಂಭೀರ ಸಮಸ್ಯೆ ಎಂದು ಹೇಳಿದ್ದಾರೆ. ಮಾಂಸಾಹಾರವನ್ನು ಎಲ್ಲೆಡೆ ನಿಷೇಧಿಸಬೇಕು. ಕೇವಲ ಕೆಲವು ಭಾಗಗಳಲ್ಲಿ ಮಾತ್ರವಲ್ಲ ಎಂದು ಅವರು ಒತ್ತಿಹೇಳಿದರು.

ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದಿರುವುದನ್ನು ಶ್ಲಾಘಿಸಿದ ಅವರು, ಇದರಲ್ಲಿ ಕೆಲವು ತೊಡಕುಗಳಿದ್ದು, ಯಥಾವತ್ತಾಗಿ ಜಾರಿಗೆ ತರಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಯುಸಿಸಿ ನಿಬಂಧನೆಗಳನ್ನು ರೂಪಿಸುವ ಮುನ್ನ ಸರ್ವಪಕ್ಷ ಸಭೆಯನ್ನು ಆಯೋಜಿಸಬೇಕು.
ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕು. ಇದನ್ನು ಚುನಾವಣಾ ಅಥವಾ ಮತಬ್ಯಾಂಕ್ ತಂತ್ರವಾಗಿ ಪರಿಗಣಿಸದೆ, ಸೂಕ್ಷ್ಮವಾಗಿ ನಿರ್ವಹಿಸಬೇಕು,” ಎಂದು ಸಿನ್ಹಾ ಒತ್ತಿಹೇಳಿದರು.
ಜನವರಿ 27 ರಂದು ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಮೂಲಕ ಭಾರತದಲ್ಲಿ ಈ ಸಂಹಿತೆ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಖ್ಯಾತಿಗೆ ಉತ್ತರಾಖಂಡ ಪಾತ್ರವಾಯಿತು. ಈ ಕಾನೂನಿನ ಪ್ರಕಾರ, ಈಗ ರಾಜ್ಯದಲ್ಲಿ ಎಲ್ಲ ಧರ್ಮೀಯರೂ ವಿವಾಹಗಳನ್ನು ಮತ್ತು ಲಿವ್-ಇನ್(ಸಹ ಜೀವನ) ಸಂಬಂಧಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಪುರುಷ ಮತ್ತು ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು, ಸಮಾನ ವಿಚ್ಛೇದನ ಹಕ್ಕು ಮತ್ತು ಲಿವ್-ಇನ್ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಕಾನೂನುಬದ್ಧ ಮಾನ್ಯತೆಯನ್ನು ಈ ಕಾನೂನು ನೀಡುತ್ತದೆ.