ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ಬೆಲೆಯಲ್ಲಿ ಶೇ.45ರಿಂದ ಶೇ.100ರಷ್ಟು ಏರಿಕೆಯಾದ ಬಳಿಕ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಟಿಕೆಟ್ (Namma Metro) ಬೆಲೆ ಇಳಿಸುವಂತೆ ಬಿಎಂಆರ್ ಸಿಎಲ್ ಗೆ ಸೂಚಿಸಿದ್ದರು. ಇದಾದ ಬಳಿಕ ಬಿಎಂಆರ್ ಸಿಎಲ್ ಎಂಡಿ ಮಹೇಶ್ವರ ರಾವ್ ಅವರ ಬೆಲೆ ಇಳಿಕೆ ಮಾಡುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ, ಟಿಕೆಟ್ ಬೆಲೆಯೇನೋ ಇಳಿಸಲಾಗಿದೆ. ಆದರೆ, ಕೇವಲ 10 ರೂ. ಇಳಿಕೆ ಮಾಡಿರುವುದು ಮತ್ತೆ ಜನ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ಮೆಟ್ರೋ ಬೆಲೆ ದುಪ್ಪಟ್ಟಾಗಿದೆಯೋ, ಅಲ್ಲೆಲ್ಲ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡಲಾಗುವುದು ಎಂದು ಮಹೇಶ್ವರ ರಾವ್ ತಿಳಿಸಿದ್ದರು. ಈಗ ಕನಿಷ್ಠ ಹಾಗೂ ಗರಿಷ್ಠ ಬೆಲೆಯನ್ನು ಹಾಗೆಯೇ ಉಳಿಸಿಕೊಂಡಿರುವ ಬಿಎಂ ಆರ್ ಸಿಎಲ್, ಕೆಲ ದರಗಳಲ್ಲಿ ಕೇವಲ 10 ರೂಪಾಯಿಯನ್ನು ಇಳಿಕೆ ಮಾಡಿದೆ.
ಎಲ್ಲಿಂದ ಎಲ್ಲಿಗೆ ಎಷ್ಟು ರೂ. ಕಡಿತ?
ಮೆಜೆಸ್ಟಿಕ್ ನಿಂದ ವೈಟ್ಫಿಲ್ಡ್ ಗೆ 90 ರೂ. ಇತ್ತು. ಈಗ ಅದನ್ನು 80 ರೂ.ಗೆ ಇಳಿಕೆ ಮಾಡಲಾಗಿದೆ. ಇನ್ನು, ಮೆಜೆಸ್ಟಿಕ್ ನಿಂದ ಚಲ್ಲಘಟ್ಟಕ್ಕೆ 70 ರೂ. ಇದ್ದ ದರ ಈಗ 60 ರೂ. ಆಗಿದೆ. ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ 20 ರೂ. ಇದ್ದ ದರ ಈಗ 10 ರೂ. ಆಗಿದೆ. ಮೆಜೆಸ್ಟಿಕ್ ನಿಂದ ಕಬ್ಬನ್ ಪಾರ್ಕ್ ಗೆ ಇದ್ದ 20 ರೂ. ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಮೆಜೆಸ್ಟಿಕ್ ನಿಂದ ರೇಷ್ಮೆ ಸಂಸ್ಥೆಗೆ ಇದ್ದ 70 ರೂ. ದರ ಈಗ 60 ರೂ. ಆಗಿದೆ. ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿಗೆ 60 ಇದ್ದ ದರ ಈಗ 50 ರೂ. ಆಗಿದೆ. ಜಾಲಹಳ್ಳಿಯಿಂದ ರೇಷ್ಮೆ ಸಂಸ್ಥೆಗೆ 90 ರೂ. ದರದಲ್ಲಿ ಬದಲಾವಣೆ ಮಾಡಿಲ್ಲ. ಇದರೊಂದಿಗೆ ಗರಿಷ್ಠ ದರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇಷ್ಟಾದರೂ ಜನ 50 ರೂಪಾಯಿ ಏರಿಸಿ, ಕೇವಲ 10 ರೂಪಾಯಿ ಇಳಿಸುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.