ನವದೆಹಲಿ: ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ ಮತ್ತು ಅವರ ಪತ್ನಿ, ಮಾಜಿ ಮಹಿಳಾ ಬಾಕ್ಸರ್ ಸವೀಟಿ ಬೂರಾ ನಡುವಿನ ದಾಂಪತ್ಯದ ಬಿರುಕು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಎರಡು ದಿನಗಳ ಹಿಂದೆ ಹಿಸಾರ್ ಪೊಲೀಸ್ ಠಾಣೆಯಲ್ಲಿ ಸವೀಟಿ ಬೂರಾ ತನ್ನ ಪತಿ ದೀಪಕ್ ಹೂಡಾ ಮೇಲೆ ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಸವೀಟಿ ಬೂರಾ ತನ್ನ ಪತಿಯ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. “ದೀಪಕ್ ಹೂಡಾ ಸಲಿಂಗಕಾಮಿ” ಎಂದು ಹೇಳುವ ಮೂಲಕ ಈ ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ತಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಳುತ್ತಾ ವಿಡಿಯೊ ಮೂಲಕ ಮಾತನಾಡಿದ ಸವೀಟಿ ಬೂರಾ, “ಎಲ್ಲರೂ ಸೇರಿ ನಾನೇ ತಪ್ಪು ಮಾಡಿರುವಂತೆ ಬಿಂಬಿಸುತ್ತಿದ್ದಾರೆ. ಪೊಲೀಸರಿಂದಲೂ ನನಗೆ ನ್ಯಾಯ ಸಿಗುತ್ತಿಲ್ಲ. ನಾನು ಠಾಣೆಯಲ್ಲಿ ದೀಪಕ್ ಮೇಲೆ ಹಲ್ಲೆ ನಡೆಸಿದ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ವೈರಲ್ ಮಾಡಲಾಗಿದೆ. ಆದರೆ ಹಲ್ಲೆಗೆ ಮುಂಚೆ ಅಲ್ಲಿ ಏನಾಗಿತ್ತು ಎಂಬ ವಿಡಿಯೊ ಏಕೆ ಬಿಡುಗಡೆ ಮಾಡಿಲ್ಲ? ದೀಪಕ್ ಹೂಡಾ ಸಲಿಂಗಕಾಮಿ ಎಂಬುದಕ್ಕೆ ಸಾಕ್ಷಿ ನನ್ನ ಬಳಿ ಇದೆ” ಎಂದು ಆರೋಪಿಸಿದ್ದಾರೆ.
ಈ ಪ್ರಕರಣದ ಹಿನ್ನೆಲೆ ಒಂದು ತಿಂಗಳ ಹಿಂದೆ ಆರಂಭವಾಗಿತ್ತು. ಸವೀಟಿ ಬೂರಾ, ದೀಪಕ್ ಹೂಡಾ ತನಗೆ ಫಾರ್ಚೂನರ್ ಕಾರು ಮತ್ತು ಒಂದು ಕೋಟಿ ರೂಪಾಯಿ ವರದಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಮತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ, ದೀಪಕ್ ಹೂಡಾ ಕೂಡ ತನ್ನ ಪತ್ನಿ ಮತ್ತು ಅವರ ಅತ್ತೆ ಮನೆಯವರ ವಿರುದ್ಧ ಆಸ್ತಿ ಕಬಳಿಕೆ ಹಾಗೂ ಮೋಸದ ಆರೋಪ ಮಾಡಿ ಪ್ರತಿ ದೂರು ಸಲ್ಲಿಸಿದ್ದರು.
ಮಾರ್ಚ್ 15 ರಂದು ಈ ವಿವಾದದ ವಿಚಾರಣೆಗಾಗಿ ದೀಪಕ್ ಹೂಡಾ, ಸವೀಟಿ ಬೂರಾ ಮತ್ತು ಅವರ ಕುಟುಂಬ ಸದಸ್ಯರು ಹಿಸಾರ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ತಾಳ್ಮೆ ಕಳೆದುಕೊಂಡ ಸವೀಟಿ ಬೂರಾ, ದೀಪಕ್ ಹೂಡಾ ಕಪಾಳಕ್ಕೆ ಹೊಡೆಯುವ ಮೂಲಕ ಹಲ್ಲೆಗೆ ಮುಂದಾಗಿದ್ದರು. ಈ ಘಟನೆಯ ವಿಡಿಯೊ ಮಾರ್ಚ್ 25 ರಂದು ವೈರಲ್ ಆಗಿತ್ತು, ಆದರೆ ಇದೀಗ ಸವೀಟಿ ಬೂರಾ ಅವರ ಹೊಸ ಆರೋಪಗಳು ಈ ಪ್ರಕರಣಕ್ಕೆ ಭಿನ್ನ ಆಯಾಮವನ್ನು ನೀಡಿವೆ.
“ನಾನು ಕೇವಲ ನ್ಯಾಯ ಬಯಸುತ್ತೇನೆ. ಆದರೆ ಎಲ್ಲರೂ ಸೇರಿ ನನ್ನನ್ನೇ ತಪ್ಪಿತಸ್ಥಳನ್ನಾಗಿ ಚಿತ್ರಿಸುತ್ತಿದ್ದಾರೆ” ಎಂದು ಸವೀಟಿ ಬೂರಾ ತಮ್ಮ ವಿಡಿಯೊದಲ್ಲಿ ಭಾವುಕರಾಗಿ ಹೇಳಿದ್ದಾರೆ. ಈ ಆರೋಪಗಳಿಗೆ ದೀಪಕ್ ಹೂಡಾ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಭಾರತೀಯ ಕ್ರೀಡಾ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.