ಮುಂಬೈ : ಮುಂಬೈ ನಾಗರಿಕ ಸಾರಿಗೆ ಸಂಸ್ಥೆಯ ಬಸ್ಸೊಂದು ಪಾದಚಾರಿಗಳ ಮೇಲೆ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿರುವ ಘಟನೆ ಉಪನಗರ ಭಾಂಡಪ್‌ನ ಜನದಟ್ಟಣೆಯ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ.
ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಬದಿಯಲ್ಲಿ ನಡೆಯುತ್ತಿದ್ದವರಿಗೆ ಡಿಕ್ಕಿಯಾಗಿ ಘಟನೆ ಸಂಭವಿಸಿತು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ 10 ರಿಂದ 12 ಪಾದಚಾರಿಗಳಿಗೆ ಗುದ್ದಿ ನಂತರ ನಿಂತಿದೆ. ಬಸ್ ದಿಢೀರ್ ನಿಯಂತ್ರಣ ಕಳೆದುಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ ಎಂದಿದ್ದಾರೆ.
ಅಪಘಾತಕ್ಕೀಡಾದ ಬಸ್, ರೂಟ್ ನಂ. 606ರಲ್ಲಿ ಸಂಚರಿಸುತ್ತಿದ್ದ ಎಲೆಕ್ಟ್ರಿಕ್ ಎಸಿ ಬಸ್ ಆಗಿದ್ದು, ರೂಟ್‌ನ ಅಂತ್ಯದಲ್ಲಿ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಚಾಲಕ ನಿಯಂತ್ರಣ ತಪ್ಪಿಸಿಕೊಂಡಿದ್ದಾನೆ. ಬಸ್ ಹಿಂದೆ ನಿಂತಿದ್ದ ಪಾದಚಾರಿಗಳ ಮೇಲೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮುಂಬೈ ಅಗ್ನಿಶಾಮಕ ದಳ, ಪೊಲೀಸರು, ಬೆಸ್ಟ್ ಸಿಬ್ಬಂದಿ ಮತ್ತು 108 ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದವು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
ಘಟನೆಯ ನಂತರ ಈ ಪ್ರದೇಶದಲ್ಲಿ ಭಯ ಮತ್ತು ಅವ್ಯವಸ್ಥೆ ಹರಡಿದೆ. ಬಸ್ ಕೆಳಗೆ ಸಿಲುಕಿದ್ದವರನ್ನು ರಕ್ಷಿಸಲು ಸ್ಥಳೀಯರು ಬಸ್‌ನ್ನು ತಳ್ಳಿ ಒಂದು ಬದಿಗೆ ಸರಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅಪಘಾತದ ವೀಡಿಯೊಗಳು ಈಗ ಎಲ್ಲೆಡೆ ಹರಿದಾಡುತ್ತಿದ್ದು, ಬಸ್ ಚಾಲಕ ಸಂತೋಷ್ ರಮೇಶ್ ಸಾವಂತ್ (52) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವರ ವಿರುದ್ಧ ಅಜಾಗ್ರತೆಯಿಂದ ಸಾವು ಉಂಟುಮಾಡಿದ ಆರೋಪದಡಿ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಬೆಸ್ಟ್ ಸಂಸ್ಥೆ ಚಾಲಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ಆದೇಶಿಸಿದೆ.
ಈ ಘಟನೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕುರ್ಲಾದಲ್ಲಿ ನಡೆದ ಬೆಸ್ಟ್ ಬಸ್ ಅಪಘಾತವನ್ನು ನೆನಪಿಗೆ ತಂದಿದೆ. ಆಗ ಬಸ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದರಿಂದ ಒಂಬತ್ತು ಮಂದಿ ಸಾವನ್ನಪ್ಪಿದ್ದರು. ಈ ಬಾರಿ ಸಹ ಒಂದೇ ತಿಂಗಳಲ್ಲಿ ಸೋಮವಾರದಂದು ನಡೆದಿರುವುದು ಆತಂಕ ಹುಟ್ಟಿಸಿದೆ. ಬೆಸ್ಟ್ ಬಸ್‌ಗಳ ಸುರಕ್ಷತೆ ಮತ್ತು ಚಾಲಕರ ತರಬೇತಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ : ಸ್ಯಾಮ್‌ಸಂಗ್ CES 2026ಗೆ ಮುನ್ನ ಮ್ಯೂಸಿಕ್ ಸ್ಟುಡಿಯೊ ಸ್ಪೀಕರ್‌ಗಳು, ಸೌಂಡ್‌ಬಾರ್‌ಗಳ ಘೋಷಣೆ



















