ನವದೆಹಲಿ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA/ಮುಡಾ) ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ವಿರುದ್ಧ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಈ ವೇಳೆ ದೇಶದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ ಗಂಭೀರವಾಗಿ ಪ್ರತಿಕ್ರಿಯಿಸಿದೆ.
“ನ್ಯಾಯಾಲಯದ ಹೊರಗೆ ಮತದಾರರ ಮಧ್ಯೆ ರಾಜಕೀಯ ಹೋರಾಟಗಳು ನಡೆಯಲಿ, ಅದಕ್ಕಾಗಿ ಈಡಿಯನ್ನು ಏಕೆ ಉಪಯೋಗಿಸುತ್ತಿದ್ದಾರೆ?” ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಪ್ರಶ್ನಿಸಿದೆ.
ʼಬಾಯಿ ತೆರೆಯಲು ನಮಗೆ ಬಲವಂತ ಮಾಡಬೇಡಿ. ಇಲ್ಲದಿದ್ದರೆ ಇ.ಡಿ ಬಗ್ಗೆ ತೀಕ್ಷ್ಣ ಟಿಪ್ಪಣಿ ಮಾಡಬೇಕಾದಿತು. ನನಗೆ ಇದರ ಬಗ್ಗೆ ಮಹಾರಾಷ್ಟ್ರದಲ್ಲಿ ಕೆಲವು ಅನುಭವಗಳಾಗಿವೆ. ದೇಶದಾದ್ಯಂತ ನೀವು ಇದನ್ನು ಮುಂದುವರಿಸಕೂಡದುʼ ಎಂದು ಇ.ಡಿ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಅವರೊಂದಿಗೆ ಸಿಜೆಐ ಕಠಿಣವಾಗಿ ಹೇಳಿದ್ದಾರೆ.


















