ಬೆಳಗಾವಿ: ಸೊಸೆಯೊಬ್ಬಳು ಅತ್ತೆಯ ಮೇಲಿನ ಕೋಪಕ್ಕೆ ಕುಡಗೋಲಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಜಾನವ್ವ ಹುದಲಿ (80) ಸೊಸೆಯಿಂದ ಹಲ್ಲೆಗೊಳಗಾದ ಅತ್ತೆ. ಶಿಲ್ಪಾ ಅತ್ತೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಸೊಸೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅತ್ತೆ ಜಾನವ್ವ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾವಿನಕಟ್ಟಿ ಗ್ರಾಮದಲ್ಲಿನ ತನ್ನ ತಾಯಿಯ ಮನೆಗೆ ಪತಿ ಊಟಕ್ಕೆ ಹೋಗಿದ್ದಕ್ಕೆ ಪತ್ನಿಗೆ ಕೋಪ ಬಂದಿದೆ. ಈ ಸಿಟ್ಟನ್ನು ಅತ್ತೆಯ ಮೇಲೆ ತೀರಿಸಿಕೊಂಡಿದ್ದಾಳೆ ಎನ್ನಲಾಗಿದೆ.
ನಾಗರಾಜ್ ನಿನ್ನೆ ರಾತ್ರಿ ಆಕೆಯ ತಾಯಿಯ ಮನೆಗೆ ಊಟಕ್ಕೆ ಹೋಗಿದ್ದರು. ಈ ವಿಚಾರಕ್ಕೆ ಪತ್ನಿ ಶಿಲ್ಪಾ ಹಾಗೂ ಪತಿಯ ಮಧ್ಯೆ ಗಲಾಟೆ ಆರಂಭವಾಗಿದೆ. ಆಗ ಬುದ್ಧಿ ಹೇಳಲು ಬಂದ ಅತ್ತೆಯ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದಾಳೆ. ತಕ್ಷಣ ಜಾನವ್ವರನ್ನು ಪುತ್ರ ನಾಗರಾಜ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅತ್ತೆ- ಸೊಸೆ ಮಧ್ಯೆ ಕಳೆದ ಹಲವು ವರ್ಷಗಳಿಂದ ಜಗಳ ನಡೆಯುತ್ತಿದ್ದು, ಹಲವು ಬಾರಿ ಪೊಲೀಸ್ ಠಾಣೆಗೂ ಹೋಗಿದ್ದಾರೆ. ಈ ಬಾರಿ ಜಗಳ ಹಲ್ಲೆಗೆ ತಿರುಗಿದ್ದು, ಶಿಲ್ಪಾ ವಿರುದ್ಧ ಮಹಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.