ಕಾಸರಗೋಡು: ವಯನಾಡು ಭೂ ಕುಸಿತಕ್ಕೆ ಇಡೀ ದೇಶವೇ ನಲುಗಿ ಹೋಗಿತ್ತು. ಇಡೀ ಭಾರತ ಕಣ್ಣೀರು ಸುರಿಸಿತ್ತು. ಸುಮಾರು 400ಕ್ಕೂ ಅಧಿಕ ಜನರನ್ನು ಬಲಿ ಪಡೆದ ಈ ಘಟನೆಯಲ್ಲಿ ಇನ್ನೂ 100ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದು, ತಮ್ಮವರಿಗಾಗಿ ಕುಟುಂಬಸ್ಥರು ಇನ್ನೂ ಕಣ್ಣೀರು ಸುರಿಸುತ್ತಿದ್ದಾರೆ.
ಇನ್ನೂ ನಾಪತ್ತೆಯಾಗದವರ ಶೋಧ ಕಾರ್ಯಕ್ಕೆ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ಕೇರಳ ಸಚಿವ ಸಂಪುಟವು ಶೀಘ್ರವೇ ತೆಗೆದುಕೊಳ್ಳಲಿದೆ.
ವಯನಾಡು ಭೂಕುಸಿತ ಪ್ರದೇಶದಲ್ಲಿದ್ದ 1,555 ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಸುಮಾರು 600 ಹೆಕ್ಟೇರ್ ಭೂಮಿ ನಾಶವಾಗಿದೆ ಎಂದು ಕೇರಳ ಸರ್ಕಾರವು ಹೈಕೋರ್ಟ್ ಗೆ ತಿಳಿಸಿದೆ. ಭೂ ಕುಸಿತ ಪ್ರದೇಶವಾಗಿರುವ ಚೂರಲ್ ಮಾಲ, . ಪುಂಜರಿಮಟ್, ಮುಂಡಕ್ಕೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಪೊಲೀಸರ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಈ ದುರಂತ ನಡೆದು 18 ದಿನ ಕಳೆದರೂ, 100ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ಪರಿಹಾರ ಕೇಂದ್ರದಲ್ಲಿರುವ ಕುಟುಂಬಗಳನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲು ಮತ್ತು ಪ್ರಸ್ತುತ ಶಿಬಿರಗಳಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಲ್ಲಿ ಪಾಠ ಆರಂಭಿಸಲು ಪ್ರಾರಂಭಿಸಲು ಸರಕಾರ ಚಿಂತನೆ ನಡೆಸಿದೆ. 10 ಶಾಲೆಗಳು ಪರಿಹಾರ ಶಿಬಿರಗಳಾಗಿ ಕಾರ್ಯನಿರ್ವಹಿಸುತ್ತಿವೆ.
100ಕ್ಕೂ ಹೆಚ್ಚು ಕುಟುಂಬಗಳು ಸಂಬಂಧಿಕರ ಮನೆ ಅಥವಾ ಬಾಡಿಗೆ ಮನೆಗಳಿಗೆ ತೆರಳಿದ್ದಾರೆ. 400ಕ್ಕೂ ಅಧಿಕ ಕುಟುಂಬಗಳು ಇನ್ನೂ ಶಿಬಿರದಲ್ಲಿದ್ದಾರೆ. ಬಾಡಿಗೆ ಮನೆಗೆ ವಾಪಸಾಗುವವರಿಗೆ ಮೂರು ತಿಂಗಳ ಆಹಾರದ ಕಿಟ್ ಮತ್ತು ಗೃಹೋಪಯೋಗಿ ವಸ್ತುಗಳನ್ನು ಒಳಗೊಂಡ ವಿಶೇಷ ಕಿಟ್ ನೀಡಲಾಗುತ್ತಿದೆ. ರಿಬಿಲ್ಡ್ ವಯನಾಡ್ ಗಾಗಿ ಸ್ಯಾಲರಿ ಚಾಲೆಂಜ್’ ಕುರಿತು ಕೇರಳ ಸರ್ಕಾರ ಆದೇಶ ಹೊರಡಿಸಿದೆ.
ಕನಿಷ್ಠ ಐದು ದಿನಗಳ ವೇತನ ನೀಡಬೇಕು ಹಾಗೂ ಇದಕ್ಕೆ ಒಪ್ಪಿಗೆ ಪತ್ರ ನೀಡಬೇಕು ಎಂದು ಸರಕಾರ ಆದೇಶಿಸಿದೆ. ಈ ಮೊತ್ತವನ್ನು ಪ್ರತ್ಯೇಕ ಖಾತೆಗೆ ವರ್ಗಾಯಿಸಲಾಗುತ್ತದೆ.