ನವದೆಹಲಿ: ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ತೋರಿದ ಪ್ರದರ್ಶನ ತನಗೆ ದಿಗ್ಗಜ ಆಟಗಾರ ಕಪಿಲ್ ದೇವ್ ಅವರನ್ನು ನೆನಪಿಸಿತು ಎಂದು ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಬಣ್ಣಿಸಿದ್ದಾರೆ. ಸಿರಾಜ್ ಅವರ ಹೋರಾಟದ ಬೌಲಿಂಗ್ ನೆರವಿನಿಂದ ಭಾರತವು ರೋಚಕ 6 ರನ್‌ಗಳ ಜಯ ಸಾಧಿಸಿತ್ತು.
ಪಂದ್ಯದ ನಂತರ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಯೋಗರಾಜ್ ಸಿಂಗ್, “ಸಿರಾಜ್ ಬೌಲಿಂಗ್ ಮಾಡಿದ ರೀತಿ, ನನಗೆ ಸಾಕ್ಷಾತ್ ಕಪಿಲ್ ದೇವ್ ಅವರನ್ನೇ ನೆನಪಿಸಿತು. ಅವರ ಹೃದಯಪೂರ್ವಕ ಪ್ರದರ್ಶನ ಅದ್ಭುತವಾಗಿತ್ತು” ಎಂದರು. ಅಲ್ಲದೆ, ಪಂದ್ಯದಲ್ಲಿ ಐದನೇ ಐದು-ವಿಕೆಟ್ ಗೊಂಚಲು ಪಡೆದ ಸಿರಾಜ್, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಗಿಲ್ ನಾಯಕತ್ವಕ್ಕೆ ಮುಕ್ತಕಂಠದ ಪ್ರಶಂಸೆ
ಭಾರತದ ನಾಯಕ ಶುಭಮನ್ ಗಿಲ್ ಅವರ ನಾಯಕತ್ವವನ್ನು ಸಹ ಯೋಗರಾಜ್ ಸಿಂಗ್ ಶ್ಲಾಘಿಸಿದರು. “ಗಿಲ್ ಅವರ ನಾಯಕತ್ವ ಅತ್ಯಂತ ಪ್ರಬುದ್ಧವಾಗಿತ್ತು. ಅವರು ಮೊದಲ ಬಾರಿಗೆ ನಾಯಕತ್ವ ವಹಿಸಿದ್ದಾರೆ ಎಂದು ಎಲ್ಲಿಯೂ ಅನಿಸಲಿಲ್ಲ” ಎಂದು ಯೋಗರಾಜ್ ಸಿಂಗ್ ಹೇಳಿದರು. ಸರಣಿಯುದ್ದಕ್ಕೂ, ಗಿಲ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 75.4ರ ಸರಾಸರಿಯಲ್ಲಿ ನಾಲ್ಕು ಶತಕಗಳ ಸಹಿತ 754 ರನ್ ಗಳಿಸಿ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ವಿಶೇಷವಾಗಿ, ಬರ್ಮಿಂಗ್‌ಹ್ಯಾಮ್‌ನ ಎರಡನೇ ಟೆಸ್ಟ್‌ನಲ್ಲಿ ಅವರ 269 ಮತ್ತು 161 ರನ್‌ಗಳ ಗಳಿಕೆ ಗಮನಾರ್ಹವಾಗಿತ್ತು.
ಈ ಅದ್ಭುತ ಪ್ರದರ್ಶನಗಳ ಮೂಲಕ ಶುಭಮನ್ ಗಿಲ್ ತಮ್ಮ ನಾಯಕತ್ವದ ಪಯಣಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಮುಂದಿನ ಸರಣಿಗಳಲ್ಲಿಯೂ ತಮ್ಮ ‘ಸುವರ್ಣ ಓಟ’ವನ್ನು ಮುಂದುವರೆಸಿ ತಂಡಕ್ಕೆ ಜಯ ತಂದುಕೊಡುವ ತವಕದಲ್ಲಿದ್ದಾರೆ.