ತುಮಕೂರು: ಮೋದಿ ಅವರು ನೂರು ವರ್ಷ ಬಾಳಬೇಕು, ಅವರ ಸೇವೆ ಭಾರತಕ್ಕೆ ಇನ್ನೂ ಬೇಕಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ತುಮಕೂರಿನಲ್ಲಿ ಇಂದು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಮೋದಿ ಹುಟ್ಟುಹಬ್ಬ ಹಿನ್ನೆಲೆ ಸೋಮಣ್ಣ ಅವರ ನೇತೃತ್ವದಲ್ಲಿ ಪ್ರವಾಸಿ ಮಂದಿರದ ಅವರ ಕಚೇರಿ ಆವರಣದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. ಸ್ವತಃ ಸಚಿವ ಸೋಮಣ್ಣ ಬಿ.ಪಿ. ಹಾಗೂ ಶುಗರ್ ಚೆಕ್ ಮಾಡಿಸಿಕೊಂಡರು. ಅದಕ್ಕೂ ಮುನ್ನ ಕ್ಯಾತಸಂದ್ರದ ಸರ್ಕಾರಿ ಮಾದರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿದರು. ತುಮಕೂರು ಲೋಕಸಭಾ ವ್ಯಾಪ್ತಿಯ 40 ಸಾವಿರ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ವಿ ಸೋಮಣ್ಣ, ಪ್ರಧಾನಿ ಮೋದಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದ್ದಾರೆ. ಮೋದಿ ಅವರ ನಾಯಕತ್ವ ಇಡೀ ವಿಶ್ವ ಒಪ್ಪಿಕೊಳ್ಳುತ್ತಿದೆ. ಕಳೆದ 11 ವರ್ಷದಲ್ಲಿ ಭಾರತ ಹಿಂದೆಂದೂ ಕಂಡಿರದಂತಹ ಅಭಿವೃದ್ಧಿ ಕಂಡಿದೆ ಎಂದಿದ್ದಾರೆ.
ಇದೇ ವೇಳೆ ಮೋದಿ ಅವರ ನಿವೃತ್ತಿ ಬಗ್ಗೆ ಮಾತನಾಡಿ, ಈಗಾಗಲೇ ಆರ್‌ಎಸ್‌ಎಸ್ ಮುಖ್ಯಸ್ಥರು ಅದರ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮೋದಿ ಅವರ ಸೇವೆ ಇನ್ನೂ ದೇಶಕ್ಕೆ ಬೇಕು ಎಂದು ತಿಳಿಸಿದ್ದಾರೆ.



















