ಬೆಂಗಳೂರು: ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾ ಮುಂದಿನ ವರ್ಷ ಜನವರಿಯಿಂದ ತನ್ನ ಕಾರುಗಳ ಬೆಲೆಯಲ್ಲಿ ಸರಾಸರಿ 2 ಶೇಕಡಾ ವರೆಗೆ ಏರಿಕೆ ಮಾಡುವುದಾಗಿ ಘೋಷಿಸಿದೆ. ಈ ಹೊಸ ಬೆಲೆಗಳು ಜನವರಿ 1, 2026ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ. ಕಂಪನಿಯು ನೀಡಿರುವ ವರದಿ ಪ್ರಕಾರ, ಉತ್ಪಾದನಾ ವೆಚ್ಚಗಳ ಏರಿಕೆ ಮತ್ತು ಆರ್ಥಿಕ ಒತ್ತಡಗಳು ಈ ಬೆಲೆ ಪರಿಷ್ಕರಣೆಗೆ ಕಾರಣವಾಗಿವೆ.
ಕಂಪನಿಯ ಎಲ್ಲಾ ಮಾದರಿಗಳ ಮೇಲೆ ಈ ಹೊಸ ದರಗಳು ಅನ್ವಯಿಸುವುದರಿಂದ, ಎಂಜಿ ಕಾರುಗಳ ಸಂಪೂರ್ಣ ಪೋರ್ಟ್ಫೋಲಿಯೊಗೆ ಇದು ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರತಿ ಮಾದರಿ ಹಾಗೂ ಮಾದರಿ-ವಾರಿ ಹೊಸ ಬೆಲೆಪಟ್ಟಿಯನ್ನು ಕಂಪನಿ ಮುಂದಿನ ವಾರಗಳಲ್ಲಿ ಪ್ರಕಟಿಸಲಿದೆ.

ಎಲೆಕ್ಟ್ರಿಕ್ ಮಾದರಿಗಳ ಬೆಲೆ ಏರಿಕೆ
ಕುಟುಂಬ ಗ್ರಾಹಕರಲ್ಲಿ ಜನಪ್ರಿಯ ಎಂಜಿ Windsor ಎಲೆಕ್ಟ್ರಿಕ್ ಕ್ರಾಸ್‌ಓವರ್ ಮಾದರಿಯ ಬೆಲೆ ಸುತ್ತಮುತ್ತ 30,000 ರೂಪಾಯಿಯಿಂದ 37,000 ರೂಪಾಯಿವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ. ಹೊಸ ದರದ ಅನ್ವಯ, ಇದರ ಎಕ್ಸ್‌ಶೋರೂಮ್ ಬೆಲೆ 14.27 ರೂಪಾಯಿ ಲಕ್ಷದಿಂದ 18.76 ಲಕ್ಷ ರೂಪಾಯಿ ಮಟ್ಟದಲ್ಲಿ ಇರಬಹುದು.
ಎಂಜಿ ಕಂಪನಿಯ ಅತ್ಯಂತ ಕೀಳುಬೆಲೆಯ ಎಲೆಕ್ಟ್ರಿಕ್ ಕಾರು ಕಾಮೆಟ್ ಇವಿಗೂ ಇದೇ ದಿಢೀರ್ ಪ್ರಭಾವ ಬೀಳಲಿದೆ. ಈ ಕಾರಿನ ಬೆಲೆ 10,000 ರಿಂದ 20,000 ರೂಪಾಯಿವರೆಗೆ ಹೆಚ್ಚಾಗಬಹುದು. ಹೀಗಾಗಿ ಕಾಮೆಟ್ ಹೊಸ ಬೆಲೆಗಳು 7.64 ಲಕ್ಷದಿಂದ 10.19 ಲಕ್ಷ ರೂಪಾಯಿ ನಡುವೆ ಇರಲಿವೆ.
ಹೊಸ ಹೆಕ್ಟರ್ ಮಾದರಿಯನ್ನೂ ಬಿಡುಗಡೆ ಮಾಡಿದ ಎಂಜಿ
ಇತ್ತೀಚೆಗಷ್ಟೇ ಎಂಜಿ ತನ್ನ ಮಧ್ಯಮ ಗಾತ್ರದ ಎಸ್ಇಒ ಹೊಸ ಫೇಸ್ಲಿಫ್ಟ್ ಮಾಡಿದ ಹೆಕ್ಟರ್ ಮಾದರಿಯನ್ನು ಬಿಡುಗಡೆ ಮಾಡಿದೆ. ಈ ನವೀಕರಿತ ಮಾದರಿ ಹೊರ ವಿನ್ಯಾಸದಲ್ಲಿ ಸಣ್ಣ ಮಟ್ಟಿನ ಬದಲಾವಣೆಗಳ ಜೊತೆಗೆ ಹೊಸ ಒಳಾಂಗಣ ಬಣ್ಣ ವಿನ್ಯಾಸ, ಹೊಸ ಅಲಾಯ್ ಚಕ್ರಗಳು ಮತ್ತು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬಂದಿದೆ.
ಹೊಸ ಹೆಕ್ಟರ್‌ನಲ್ಲಿ 14 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 7 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪನೋರಾಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ, ಹಾಗೂ ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ.
ನೂತನ ಹೆಕ್ಟರ್ SUV ಬೆಲೆ ಈಗ 11.99 ಲಕ್ಷ ರೂಪಾಯಿಂದ 18.99 ಲಕ್ಷ ರೂಪಾಯಿ ಇರಲಿದ್ದು, ಹೆಕ್ಟರ್ ಪ್ಲಸ್ (7 ಸೀಟರ್) ಮಾದರಿಯ ಬೆಲೆ 17.29 ಲಕ್ಷದಿಂದ 19.49 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಡೀಸೆಲ್ ಮತ್ತು 6 ಸೀಟು ಮಾದರಿಗಳ ದರವನ್ನು ಕಂಪನಿ 2026ರಲ್ಲಿ ಪ್ರತ್ಯೇಕವಾಗಿ ಘೋಷಿಸಲು ಉದ್ದೇಶಿಸಿದೆ.
ಉದ್ಯಮದಲ್ಲಿ ಸಾಮಾನ್ಯವಾದ ಪ್ರವೃತ್ತಿ
ಆಟೋಮೊಬೈಲ್ ವಲಯದಲ್ಲಿ ಹೊಸ ವರ್ಷ ಪ್ರಾರಂಭದ ಸಮಯದಲ್ಲಿ ಬೆಲೆ ಪರಿಷ್ಕರಣೆ ಒಂದು ಸಾಮಾನ್ಯ ಪ್ರವೃತ್ತಿಯಾಗಿದೆ. ಇತರ ಪ್ರಮುಖ ಕಾರು ತಯಾರಕರು ಕೂಡ ಇದೇ ರೀತಿಯ ಏರಿಕೆಯನ್ನು ಘೋಷಿಸಿದ್ದರೆ ಅದರಲ್ಲಿ ಎಂಜಿ ಹೊಸ ಸೇರ್ಪಡೆ ಎಂದರೆ ತಪ್ಪಾಗುವುದಿಲ್ಲ. ಪರಿಷ್ಕೃತ ದರಗಳು ಅಧಿಕೃತವಾಗಿ ಪ್ರಕಟವಾದ ನಂತರ ಪ್ರತಿ ಕಾರು ಮಾದರಿಯ ನಿಖರ ಪ್ರಭಾವ ಸ್ಪಷ್ಟವಾಗಲಿದೆ.
ಇದನ್ನೂ ಓದಿ: ಅಮೆಜಾನ್‌ನಲ್ಲಿ ಒನ್‌ಪ್ಲಸ್ 13 ಬೆಲೆಯಲ್ಲಿ ಭಾರಿ ಇಳಿಕೆ : ಖರೀದಿಸಲು 4 ಪ್ರಮುಖ ಕಾರಣಗಳು, ಬೇಡ ಎನ್ನಲು ಒಂದೇ ಕಾರಣ



















