ಮೀರತ್: ಮರ್ಚೆಂಟ್ ನೇವಿಯ ಮಾಜಿ ಅಧಿಕಾರಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಕೊಲೆಗೈದಿರುವ ಘಟನೆಯನ್ನು ಕೆದಕುತ್ತಾ ಹೋದಂತೆ ಹತ್ತು ಹಲವು ಆಘಾತಕಾರಿ ಸಂಗತಿಗಳು ಬಯಲಾಗುತ್ತಲೇ ಇವೆ. ಈ ಕೊಲೆಯ ಹಿಂದೆ ಪತ್ನಿಯ ಬಾಲಿವುಡ್ ಆಕಾಂಕ್ಷೆ, ಹಣಕಾಸು ವಹಿವಾಟು, ಕಾಂಚಾಣ ದಾಹ, ಮಾಟ-ಮಂತ್ರ… ಹೀಗೆ ಅನೇಕ ವಿಚಾರಗಳು ಸುತ್ತಿಕೊಂಡಿರುವುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.
ವಾಣಿಜ್ಯ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೌರಭ್ ಗುಪ್ತಾರನ್ನು ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಉತ್ತರಪ್ರದೇಶದ ಮೀರತ್ ನಲ್ಲಿ ಇತ್ತೀಚೆಗೆ ಚೂರಿ ಇರಿದು ಕೊಲೆಗೈದಿದ್ದದರು. ಬಳಿಕ ಅವರ ದೇಹವನ್ನು 15 ತುಂಡುಗಳಾಗಿ ಮಾಡಿ, ಒಂದು ಟ್ಯಾಂಕ್ ನೊಳಕ್ಕೆ ಹಾಕಿ, ಅದರ ಮೇಲೆ ಹಸಿ ಸಿಮೆಂಟ್ ಅನ್ನು ಸುರಿದಿದ್ದರು. ಇದಲ್ಲದೇ, ಕೊಲೆಗೈದ ಬಳಿಕ ಮುಸ್ಕಾನ್‌ನ ಪ್ರಿಯಕರ ಸಾಹಿಲ್ ಶುಕ್ಲಾ, ಸೌರಭ್ ಅವರ ತಲೆ ಮತ್ತು ಕೈಗಳನ್ನು ತನ್ನ ಕೊಠಡಿಗೆ ಒಯ್ದು, ಮಾಟ-ಮಂತ್ರವನ್ನೂ ನಡೆಸಿದ್ದ ಎಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಕೋಣೆಯಲ್ಲಿತ್ತು ಡ್ರ್ಯಾಗನ್ ಚಿತ್ರ, ವಿಚಿತ್ರ ಸಂಕೇತಗಳು, ಬೆಕ್ಕು:
ಸಾಹಿಲ್‌ನ ಕೋಣೆಯಲ್ಲಿ ವಿಲಕ್ಷಣ ಚಿತ್ರಗಳು, ಡ್ರ್ಯಾಗನ್ ಗಳ ರೇಖಾಚಿತ್ರಗಳು ಮತ್ತು ಇತರ ವಿಚಿತ್ರ ಚಿಹ್ನೆಗಳು ಪತ್ತೆಯಾಗಿವೆ. ಇದನ್ನೆಲ್ಲ ನೋಡಿರುವ ಪೊಲೀಸರು, ಸಾಹಿಲ್ ಮಾಟಮಂತ್ರವನ್ನೂ ಅಭ್ಯಾಸ ಮಾಡಿದ್ದ ಎಂದು ಶಂಕಿಸಿದ್ದಾರೆ. ಅವನ ಕೋಣೆಯಲ್ಲಿ ಒಂದೂ ಬೆಕ್ಕು ಕಂಡುಬಂದಿದೆ ಜೊತೆಗೆ ಹಲವಾರು ಬಿಯರ್ ಬಾಟಲಿಗಳೂ ಸಿಕ್ಕಿವೆ. ಸೌರಭ್ ರನ್ನು ಕೊಂದ ಬಳಿಕ ಅವರ ಕತ್ತರಿಸಿದ ತಲೆ ಮತ್ತು ಕೈಗಳನ್ನು ಮೊದಲು ಕೆಲವು ತಾಂತ್ರಿಕ ಆಚರಣೆಗಳನ್ನು ಮಾಡಲೆಂದು ಸಾಹಿಲ್ ತನ್ನ ಕೋಣೆಗೆ ಹೊತ್ತೊಯ್ದಿದ್ದ. ಅಲ್ಲಿ ಮಾಟ-ಮಂತ್ರ ಪ್ರಕ್ರಿಯೆ ಮುಗಿಸಿದ ನಂತರ ಅವುಗಳನ್ನು ಮುಸ್ಕಾನ್‌ನ ಮನೆಗೆ ವಾಪಸ್ ತಂದು ಇಬ್ಬರೂ ಸೇರಿ ದೇಹದ ಭಾಗಗಳನ್ನು ಡ್ರಮ್ ನಲ್ಲಿ ಹಾಕಿ, ಸಿಮೆಂಟ್ ಸುರಿದಿದ್ದರು.
ಮಾದಕವಸ್ತುಗಳಿಗೆ ವ್ಯಸನಿಯಾಗಿದ್ದ ಸಾಹಿಲ್ ಅತೀಂದ್ರೀಯ ಶಕ್ತಿಗಳನ್ನು ನಂಬುತ್ತಿದ್ದ. ಹೀಗಾಗಿ ಹೆಚ್ಚಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಸಾಹಿಲ್ ತನ್ನ ಮನೆಯಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ. ಅವನ ಜೊತೆಗೆ ಅವನ ಅಜ್ಜಿಯೂ ವಾಸವಾಗಿದ್ದರು. ಸಾಹಿಲ್ ತಾಯಿ ಬಹಳ ಹಿಂದೆಯೇ ನಿಧನರಾಗಿದ್ದರು, ತಂದೆ ನೋಯ್ಡಾದಲ್ಲಿ ವಾಸಿಸುತ್ತಿದ್ದರು.

ಸತ್ತುಹೋಗಿರುವ ನಿನ್ನ ತಾಯಿ ನಾನೇ:
ವಾಸ್ತವದಲ್ಲಿ, ಸಾಹಿಲ್ ಗಿದ್ದ ಮೂಢನಂಬಿಕೆಗಳನ್ನು ಮುಸ್ಕಾನ್ ಸರಿಯಾಗಿಯೇ ದುರುಪಯೋಗ ಪಡಿಸಿಕೊಂಡಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ಮುಸ್ಕಾನ್ ನಕಲಿ ಸ್ನ್ಯಾಪ್ ಚಾಟ್ ಖಾತೆ ತೆರೆದು, ಸಾಹಿಲ್‌ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಳು. “ನಾನು ನಿನ್ನ ಮೃತ ತಾಯಿ” ಎಂದು ಸಾಹಿಲ್ ಗೆ ಹೇಳಿ ನಂಬಿಸಿದ್ದಳು. ತಾಯಿಯಂತೆ ನಟಿಸುತ್ತಾ, ಪತಿ ಸೌರಭ್ ನನ್ನು ಕೊಲ್ಲಲು ಸಾಹಿಲ್ ಮನವೊಲಿಸಿದಳು ಎಂದೂ ಪೊಲೀಸರು ಹೇಳಿದ್ದಾರೆ.
ಬಾಲಿವುಡ್ ನಟಿಯಾಗುವ ಬಯಕೆ:
ಮುಸ್ಕಾನ್‌ಗೆ ಮೊದಲಿನಿಂದಲೇ ಬಾಲಿವುಡ್ ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಈ ಆಸೆಯಿಂದ ಆಕೆ ಹಲವಾರು ಬಾರಿ ಮನೆಯಿಂದ ಓಡಿಹೋಗಿದ್ದಳು. ಮದುವೆಯಾದ ಬಳಿಕವೂ ಇದೇ ರೀತಿ ಓಡಿಹೋಗಿದ್ದು, ಇದು ದಂಪತಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು ಎಂದೂ ಹೇಳಲಾಗಿದೆ.
ಐಫೋನ್ ಖರೀದಿಗೆ ಹಣ ಬಳಕೆ:
ಏತನ್ಮಧ್ಯೆ, ಸೌರಭ್ ಅವರ ಸಹೋದರ ಬಬ್ಲು, ಮಾಜಿ ನೌಕಾ ಅಧಿಕಾರಿಯಾಗಿದ್ದ ಸೌರಭ್ ಲಂಡನ್ ನಿಂದ ಮರಳುವಾಗ ಸಾಕಷ್ಟು ಹಣವನ್ನೂ ತಂದಿದ್ದರು ಎಂದು ಹೇಳಿದ್ದಾರೆ. ಸೌರಭ್ ತನ್ನ ಪಾಸ್ಪೋರ್ಟ್ ನವೀಕರಣಕ್ಕಾಗಿ ಹಾಗೂ 6 ವರ್ಷದ ಪುತ್ರಿಯ ಜನ್ಮದಿನದ ಆಚರಣೆಗೆಂದು ಊರಿಗೆ ಮರಳಿದ್ದರು. ಆದರೆ, ಪತ್ನಿ ಮುಸ್ಕಾನ್ ಸೌರಭ್ ಅವರ ಹಣವನ್ನು ಆಸ್ತಿ ಮತ್ತು ಐಫೋನ್ ಖರೀದಿಸಲು ಬಳಸಿದ್ದಾರೆ ಎಂದು ಬಬ್ಲು ಆರೋಪಿಸಿದ್ದಾರೆ. ಅಲ್ಲದೇ ಮುಸ್ಕಾನ್ ಪೋಷಕರು ಸಹ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಅವರ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಹೀಗಾಗಿ ಸೌರಭ್ ಕೊಲೆಯಲ್ಲಿ ಅವರ ಪಾತ್ರವೂ ಇದೆ ಎಂದು ಬಬ್ಲು ಆರೋಪಿಸಿದ್ದಾರೆ.