ಮುಜಾಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಏಕಾಏಕಿ ಪ್ರತಿಭಟನೆಗಳು ಭುಗಿಲೆದ್ದಿವೆ. ಅವಾಮಿ ಆಕ್ಷನ್ ಕಮಿಟಿ (ಎಎಸಿ) ನೇತೃತ್ವದಲ್ಲಿ ಸೋಮವಾರದಿಂದ “ಶಟರ್-ಡೌನ್ ಮತ್ತು ವೀಲ್-ಜಾಮ್” (ಅಂಗಡಿ ಮುಂಗಟ್ಟು ಬಂದ್ ಮತ್ತು ವಾಹನಗಳ ಸ್ಥಗಿತ) ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಸಾವಿರಾರು ಜನರು ಬೀದಿಗಿಳಿದು ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಇಡೀ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ, ಇಸ್ಲಾಮಾಬಾದ್ ಸರ್ಕಾರವು ಭಾರಿ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದು, ಮಧ್ಯರಾತ್ರಿಯಿಂದಲೇ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

“ಪ್ರತಿಭಟನೆಗೆ ಕಾರಣವೇನು”?
ಕಳೆದ ಕೆಲವು ತಿಂಗಳುಗಳಿಂದ ಜನರ ಗಮನ ಸೆಳೆದಿರುವ ನಾಗರಿಕ ಸಮಾಜಗಳ ಒಕ್ಕೂಟವಾದ ಅವಾಮಿ ಆಕ್ಷನ್ ಕಮಿಟಿ, ದಶಕಗಳಿಂದ ರಾಜಕೀಯವಾಗಿ ಕಡೆಗಣಿಸಲ್ಪಟ್ಟಿರುವುದನ್ನು ಮತ್ತು ಆರ್ಥಿಕ ನಿರ್ಲಕ್ಷ್ಯವನ್ನು ವಿರೋಧಿಸಿ ಈ ಪ್ರತಿಭಟನೆಗೆ ಕರೆ ನೀಡಿದೆ. ಸಮಿತಿಯು 38 ಅಂಶಗಳ ಬೇಡಿಕೆ ಪಟ್ಟಿಯನ್ನು ಸರ್ಕಾರದ ಮುಂದಿಟ್ಟಿದೆ.
ಆ ಪೈಕಿ ಪ್ರಮುಖ ಬೇಡಿಕೆಗಳೆಂದರೆ:
- ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ನಿರಾಶ್ರಿತರಿಗಾಗಿ ಪಿಒಕೆ ವಿಧಾನಸಭೆಯಲ್ಲಿ ಮೀಸಲಿಟ್ಟಿರುವ 12 ಸ್ಥಾನಗಳನ್ನು ರದ್ದುಪಡಿಸಬೇಕು. ಇದು ಸ್ಥಳೀಯರ ಪ್ರಾತಿನಿಧ್ಯವನ್ನು ದುರ್ಬಲಗೊಳಿಸುತ್ತದೆ ಎಂಬುದು ಪ್ರತಿಭಟನಾಕಾರರ ವಾದ.
- ಸಬ್ಸಿಡಿ ದರದಲ್ಲಿ ಹಿಟ್ಟು ಪೂರೈಸುವುದು.
- ಮಂಗಳಾ ಜಲವಿದ್ಯುತ್ ಯೋಜನೆಗೆ ಅನುಗುಣವಾಗಿ ನ್ಯಾಯಯುತ ವಿದ್ಯುತ್ ದರ ನಿಗದಿಪಡಿಸುವುದು.
- ಇಸ್ಲಾಮಾಬಾದ್ ದೀರ್ಘಕಾಲದಿಂದ ನೀಡಿದ ಸುಧಾರಣಾ ಭರವಸೆಗಳನ್ನು ಈಡೇರಿಸುವುದು.
“ನಮ್ಮ ಹೋರಾಟ ಯಾವುದೇ ಸಂಸ್ಥೆಯ ವಿರುದ್ಧವಲ್ಲ, ಬದಲಾಗಿ ಕಳೆದ 70 ವರ್ಷಗಳಿಂದ ನಮ್ಮ ಜನರಿಗೆ ನಿರಾಕರಿಸಲಾದ ಮೂಲಭೂತ ಹಕ್ಕುಗಳಿಗಾಗಿ,” ಎಂದು ಮುಜಫರಾಬಾದ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಎಎಸಿಯ ಪ್ರಮುಖ ನಾಯಕ ಶೌಕತ್ ನವಾಜ್ ಮಿರ್ ಗುಡುಗಿದ್ದಾರೆ. “ಸಾಕಷ್ಟು ಅನ್ಯಾಯವಾಗಿದೆ. ಒಂದೋ ನಮ್ಮ ಹಕ್ಕುಗಳನ್ನು ನೀಡಿ, ಇಲ್ಲವೇ ಜನರ ಆಕ್ರೋಶವನ್ನು ಎದುರಿಸಿ,” ಎಂದು ಅವರು ಎಚ್ಚರಿಸಿದ್ದಾರೆ.
“ಸರ್ಕಾರದ ದಮನಕಾರಿ ನೀತಿ ಮತ್ತು ವಿಫಲ ಮಾತುಕತೆ”
ಪ್ರತಿಭಟನಾಕಾರರ ಹೋರಾಟವನ್ನು ಹತ್ತಿಕ್ಕಲು ಸರ್ಕಾರವು ಸೇನಾ ಬಲವನ್ನು ಪ್ರದರ್ಶಿಸುತ್ತಿದೆ. ಪ್ರಮುಖ ಪಟ್ಟಣಗಳಲ್ಲಿ ಶಸ್ತ್ರಸಜ್ಜಿತ ಪಡೆಗಳು ಧ್ವಜ ಮೆರವಣಿಗೆ ನಡೆಸಿದ್ದು, ಪಂಜಾಬ್‌ನಿಂದ ಸಾವಿರಾರು ಸೈನಿಕರನ್ನು ಕರೆಸಿಕೊಳ್ಳಲಾಗಿದೆ. ಶನಿವಾರ ಮತ್ತು ಭಾನುವಾರ ಪ್ರಮುಖ ನಗರಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಪೊಲೀಸರು ಮುಚ್ಚಿದ್ದಾರೆ. ಸ್ಥಳೀಯ ಭದ್ರತಾ ಪಡೆಗಳಿಗೆ ಬೆಂಬಲವಾಗಿ ಇಸ್ಲಾಮಾಬಾದ್‌ನಿಂದ ಹೆಚ್ಚುವರಿಯಾಗಿ 1,000 ಪೊಲೀಸರನ್ನು ಕಳುಹಿಸಲಾಗಿದೆ.
ಈ ನಡುವೆ, ಎಎಸಿ ಸಮಾಲೋಚಕರು, ಪಿಒಕೆ ಆಡಳಿತ ಮತ್ತು ಫೆಡರಲ್ ಮಂತ್ರಿಗಳ ನಡುವಿನ ಸುದೀರ್ಘ ಮಾತುಕತೆ ವಿಫಲವಾಗಿದೆ. ಸುಮಾರು 13 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ, ನಿರಾಶ್ರಿತರ ವಿಧಾನಸಭಾ ಸ್ಥಾನಗಳನ್ನು ತೆಗೆದುಹಾಕುವ ವಿಚಾರದಲ್ಲಿ ಸಮಿತಿಯು ರಾಜಿ ಮಾಡಿಕೊಳ್ಳಲು ನಿರಾಕರಿಸಿದಾಗ ಸಂಧಾನ ಮುರಿದುಬಿದ್ದಿದೆ. “ಮಾತುಕತೆ ಅಪೂರ್ಣ ಮತ್ತು ಅನಿರ್ದಿಷ್ಟವಾಗಿದೆ” ಎಂದು ಘೋಷಿಸಿದ ಮಿರ್, ಮುಷ್ಕರವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಭಾನುವಾರದಂದು ಮುಜಫರಾಬಾದ್‌ನ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ತೆರೆದು, ಮುಷ್ಕರಕ್ಕೆ ಮುನ್ನ ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟರು. ಭದ್ರತಾ ಪಡೆಗಳ ವಾಹನಗಳು ನಗರಕ್ಕೆ ಲಗ್ಗೆ ಇಡುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಸರ್ಕಾರದ ಕಠಿಣ ಕ್ರಮದ ಬಗ್ಗೆ ಜನರಲ್ಲಿ ಆತಂಕ ಮನೆಮಾಡಿದೆ. ಪಾಕಿಸ್ತಾನದ ಬಲವಂತದ ಆಕ್ರಮಣದಿಂದ ಸ್ವಾತಂತ್ರ್ಯ ಬೇಕೆಂದು ಜನರು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ.
ಸರ್ಕಾರದ ಪ್ರಯತ್ನಗಳ ಹೊರತಾಗಿಯೂ, ಪ್ರತಿಭಟನೆಯು ಶಾಂತಿಯುತವಾಗಿರುತ್ತದೆ ಆದರೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎಎಸಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಇಂಟರ್ನೆಟ್ ಸ್ಥಗಿತ ಮತ್ತು ಬಿಗಿ ಭದ್ರತೆಯ ನಡುವೆ, ಸೋಮವಾರದ ಈ ಮುಖಾಮುಖಿ ಪಿಒಕೆಯ ರಾಜಕೀಯ ಹಕ್ಕುಗಳ ಹೋರಾಟದಲ್ಲಿ ಒಂದು ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ. ಎರಡೂ ಕಡೆಯವರು ಹಿಂದೆ ಸರಿಯಲು ಸಿದ್ಧರಿಲ್ಲದ ಕಾರಣ, ಈ ಸಂಘರ್ಷವು ಪಾಕ್ ಆಕ್ರಮಿತ ಕಾಶ್ಮೀರದ ಕಣಿವೆಗಳನ್ನು ಮೀರಿ ವ್ಯಾಪಿಸುವ ಲಕ್ಷಣಗಳು ಗೋಚರಿಸುತ್ತಿವೆ.



















