ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಶೇಖ್ ಹಸೀನಾ ದೇಶ ಬಿಟ್ಟು ಭಾರತಕ್ಕೆ ಪಲಾಯನ ಮಾಡಿದರೂ ಬಾಂಗ್ಲಾದೇಶದಲ್ಲಿ ಮಾತ್ರ ಹಿಂಸಾಚಾರ ಅಂತ್ಯವಾಗುತ್ತಿಲ್ಲ. ಅಲ್ಲಿನ ಹಿಂದೂಗಳ ಮೇಲೆಯೂ ದುಷ್ಕರ್ಮಿಗಳು ದಾಳಿ ಮಾಡಿ, ಹಿಂಸಿಸುತ್ತಿದ್ದಾರೆ. ಹೀಗಾಗಿ ಅಲ್ಲಿನ ಹಿಂದೂಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
1971ರ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರು ಸೇರಿದಂತೆ ನಿರ್ದಿಷ್ಟ ಗುಂಪುಗಳಿಗೆ ನಾಗರಿಕ ಸೇವಾ ಉದ್ಯೋಗಗಳನ್ನು ಕಾಯ್ದಿರಿಸುವ ಕೋಟಾ ವ್ಯವಸ್ಥೆ ಜಾರಿಗೊಳಿಸಿದ್ದರಿಂದಾಗಿ ಬಾಂಗ್ಲಾದಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಆದರೆ, ಈ ಪ್ರತಿಭಟನೆಯಲ್ಲಿ ಸಂಪೂರ್ಣವಾಗಿ ರಾಜಕೀಯ ಬೆರೆತು ಹಿಂಸಾರೂಪ ಪಡೆಯಿತು. ಪರಿಣಾಮ 300ಕ್ಕೂ ಅಧಿಕ ಜನರನ್ನು ಪ್ರತಿಭಟನೆ ಬಲಿ ಪಡೆಯಿತು. ಪೊಲೀಸ್ ಕಚೇರಿಗಳು ಸೇರಿದಂತೆ ದೊಡ್ಡ ದೊಡ್ಡ ಸಂಸ್ಥೆಗಳ ಕಚೇರಿಗಳು ಕೂಡ ಹಿಂಸಾಚಾರಕ್ಕೆ ಬಲಿಯಾದವು.
ಈಗ ಶೇಖ್ ಹಸೀನಾ ಅವರು ಭಾರತಕ್ಕೆ ಬಂದಿದ್ದರಿಂದಾಗಿ ಅಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ಹೀಗಾಗಿ ದಾಳಿ ವಿರೋಧಿಸಿ ಲಕ್ಷಾಂತರ ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನವಾದ ನಂತರ 52 ಜಿಲ್ಲೆಗಳಲ್ಲಿ 205ಕ್ಕೂ ಹೆಚ್ಚು ದಾಳಿಯ ಘಟನೆಗಳನ್ನು ಹಿಂದೂಗಳು ಎದುರಿಸಿದ್ದಾರೆ. ನೂರಾರು ಹಿಂದೂಗಳು ಮನೆಗಳು ಮತ್ತು ವ್ಯವಹಾರಗಳ ಮೇಲಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಹಲವರು ಬಲಿಯಾಗಿದ್ದಾರೆ ಎಂದು ಪ್ರತಿಭಟಿಸಿದ್ದಾರೆ.
ಹಿಂದೂ ದೇವಾಲಯಗಳನ್ನು ಸಹ ಧ್ವಂಸಗೊಳಿಸಲಾಗಿದೆ ಮತ್ತು ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಇಬ್ಬರು ಹಿಂದೂ ನಾಯಕರು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಸಾವಿರಾರು ಬಾಂಗ್ಲಾದೇಶಿ ಹಿಂದೂಗಳು ಭಾರತಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ. ಹೀಗಾಗಿ ಅಲ್ಪಸಂಖ್ಯಾತರ ರಕ್ಷಣೆಗಾಗಿ ಕಾನೂನು ಜಾರಿಗೆ ಒತ್ತಾಯಿಸಿ ಹಿಂದೂ ಪ್ರತಿಭಟನಾಕಾರರು ಪ್ರತಿಭಟಿಸಿದ್ದಾರೆ.
ಅಂದಾಜು 7 ಲಕ್ಷಕ್ಕೂ ಅಧಿಕ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಈ ವೇಳೆ ಬಾಂಗ್ಲಾದೇಶದ ಹಂಗಾಮಿ ನಾಯಕ ಮುಹಮ್ಮದ್ ಯೂನಸ್ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಈ ಕೃತ್ಯವನ್ನು “ಹೇಯ ಕೃತ್ಯ” ಎಂದು ಟೀಕಿಸಿದ್ದಾರೆ. ಅಲ್ಪಸಂಖ್ಯಾತರನ್ನು ರಕ್ಷಿಸುವಂತೆ ಹೇಳಿದ್ದಾರೆ.