ವಾಷಿಂಗ್ಟನ್: ಇರಾನ್‌ನಲ್ಲಿ ನಡೆಯುತ್ತಿರುವ ಆಂತರಿಕ ದಂಗೆ ಮತ್ತು ಪ್ರತಿಭಟನಾಕಾರರ ಮೇಲೆ ಅಲ್ಲಿನ ಸರ್ಕಾರ ನಡೆಸುತ್ತಿರುವ ದಮನಕಾರಿ ನೀತಿಯ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಮೆತ್ತಗಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೆ ವಾಗ್ದಾಳಿ ಆರಂಭಿಸಿದ್ದಾರೆ. ಇರಾನ್ ಕಡೆಗೆ ಅಮೆರಿಕದ “ನೌಕಾಪಡೆಯ ಬೃಹತ್ ಹಡಗುಗಳು” (Massive Fleet) ಸಾಗುತ್ತಿದೆ ಎಂದು ಘೋಷಿಸಿರುವ ಟ್ರಂಪ್, ಒಂದು ವೇಳೆ ಪರಿಸ್ಥಿತಿ ಮಿತಿ ಮೀರಿದರೆ ಕಠಿಣ ಮಿಲಿಟರಿ ಕ್ರಮ ಅನಿವಾರ್ಯವಾಗಲಿದೆ ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಇರಾನ್ ಕಡೆಗೆ ದೊಡ್ಡ ಪ್ರಮಾಣದ ಸೈನ್ಯ ಮತ್ತು ಯುದ್ಧನೌಕೆಗಳನ್ನು ಕಳುಹಿಸುತ್ತಿದ್ದೇವೆ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬುದು ನನ್ನ ಆಶಯ, ಆದರೆ ಇರಾನ್ ಪ್ರತಿ ನಡೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ,” ಎಂದು ಎಚ್ಚರಿಸಿದ್ದಾರೆ.
837 ಮಂದಿಯ ಸಾವು ತಡೆದ ಅಮೆರಿಕ!
ಇರಾನ್ ಸರ್ಕಾರವು ಬಂಧಿತ 837 ಪ್ರತಿಭಟನಾಕಾರರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಲು ಸಿದ್ಧತೆ ನಡೆಸಿತ್ತು. ಆದರೆ ಅಮೆರಿಕದ ತೀವ್ರ ಒತ್ತಡ ಮತ್ತು ಮಿಲಿಟರಿ ದಾಳಿಯ ಬೆದರಿಕೆಯಿಂದಾಗಿ ಟೆಹ್ರಾನ್ ಈ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. “ಕಳೆದ ಗುರುವಾರ ನಡೆಯಬೇಕಿದ್ದ 837 ಮಂದಿಯನ್ನು ನೇಣಿಗೇರಿಸುವ ಪ್ರಕ್ರಿಯೆಯನ್ನು ನಾನು ತಡೆದಿದ್ದೇನೆ. ಒಂದು ವೇಳೆ ನೀವು ಈ ಜನರನ್ನು ಗಲ್ಲಿಗೇರಿಸಿದರೆ, ಹಿಂದೆಂದೂ ಅನುಭವಿಸದ ಮಟ್ಟದ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ನಾನು ಎಚ್ಚರಿಕೆ ನೀಡಿದ್ದೆ. ನನ್ನ ಎಚ್ಚರಿಕೆಗೆ ಹೆದರಿ ಅವರು ಗಲ್ಲಿಗೇರಿಸುವ ಪ್ರಕ್ರಿಯೆಯನ್ನು ಕೇವಲ ಮುಂದೂಡಿಲ್ಲ, ಬದಲಾಗಿ ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ,” ಎಂದು ಟ್ರಂಪ್ ಹೇಳಿದ್ದಾರೆ. ಮರಣದಂಡನೆಗೆ ಗುರಿಯಾಗಿದ್ದವರಲ್ಲಿ ಬಹುತೇಕರು ಯುವಕರಾಗಿದ್ದರು ಎಂಬ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ.
ಸಮರ ಸನ್ನದ್ಧ ಸ್ಥಿತಿಯಲ್ಲಿ ಅಮೆರಿಕದ ಯುದ್ಧನೌಕೆಗಳು
ಅಮೆರಿಕದ ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ, ‘ಯುಎಸ್ಎಸ್ ಅಬ್ರಹಾಂ ಲಿಂಕನ್’ ವಿಮಾನವಾಹಕ ನೌಕೆ ಸೇರಿದಂತೆ ಹಲವು ಯುದ್ಧನೌಕೆಗಳು ಮತ್ತು ಯುದ್ಧ ವಿಮಾನಗಳು ಈಗಾಗಲೇ ಮಧ್ಯಪ್ರಾಚ್ಯದತ್ತ ಧಾವಿಸಿವೆ. ಕಳೆದ ಜೂನ್‌ನಲ್ಲಿ ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ನಡೆಸಿದ ದಾಳಿಗಿಂತಲೂ ಭೀಕರವಾದ ಪ್ರತಿರೋಧವನ್ನು ಈ ಬಾರಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧಿಕಾರಿಗಳು ಇರಾನ್‌ಗೆ ಸಂದೇಶ ರವಾನಿಸಿದ್ದಾರೆ. ಇರಾನ್ ಮತ್ತೆ ತನ್ನ ಪರಮಾಣು ಚಟುವಟಿಕೆಗಳನ್ನು ಆರಂಭಿಸಿದರೆ ಅಥವಾ ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ಮುಂದುವರಿಸಿದರೆ ಅಮೆರಿಕ ಸುಮ್ಮನಿರುವುದಿಲ್ಲ ಎಂದು ದಾವೋಸ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಆರ್ಥಿಕ ಸಂಕಷ್ಟ ಮತ್ತು ಕಠಿಣ ಆಡಳಿತದ ವಿರುದ್ಧ ಡಿಸೆಂಬರ್‌ನಿಂದ ಇರಾನ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಾನವ ಹಕ್ಕುಗಳ ಸಂಘಟನೆಗಳ ವರದಿಯ ಪ್ರಕಾರ, ಈ ಹಿಂಸಾಚಾರದಲ್ಲಿ ಈವರೆಗೆ ಸಾವಿರಾರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಇರಾನ್ ಅಧಿಕಾರಿಗಳು ಕೂಡ 5,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದನ್ನು ಒಪ್ಪಿಕೊಂಡಿದ್ದು, ಇದರಲ್ಲಿ ನೂರಾರು ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಈ ಪ್ರತಿಭಟನೆಯನ್ನು ಪ್ರಚೋದಿಸುತ್ತಿವೆ ಎಂದು ಇರಾನ್ ಆರೋಪಿಸುತ್ತಿದ್ದರೆ, ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಇರಾನ್‌ನ ದಮನಕಾರಿ ನೀತಿಯನ್ನು ಖಂಡಿಸುತ್ತಿದ್ದಾರೆ.
ಇದನ್ನೂ ಓದಿ : ಸ್ಮೃತಿ ಮಂಧಾನ ಮಾಜಿ ಪ್ರಿಯತಮ ಪಲಾಶ್ ಮುಚ್ಚಲ್ ವಿರುದ್ಧ 40 ಲಕ್ಷ ರೂ. ವಂಚನೆ ಆರೋಪ



















