ಬೆಂಗಳೂರು: ರಾಜ್ಯದ ಜನ ಈಗಾಗಲೇ ಹಲವು ಬೆಲೆಯೇರಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಲಿನಿಂದ ಹಿಡಿದು ಪೆಟ್ರೋಲ್-ಡೀಸೆಲ್ ವರೆಗೆ ಬೆಲೆಯೇರಿಕೆಯಾಗಿರುವ ಕಾರಣ ಜನಜೀವನ ದುಬಾರಿಯಾಗಿದೆ. ಇದರ ಬೆನ್ನಲ್ಲೇ, ಏಪ್ರಿಲ್ 8ರಿಂದ ಮಾರುತಿ ಸುಜುಕಿ (Maruti Suzuki) ಕಾರುಗಳ ಬೆಲೆಯೂ ಏರಿಕೆಯಾಗಿದೆ. ಒಂದು ಕಾರಿನ ಬೆಲೆಯು 2,500 ರೂಪಾಯಿಯಿಂದ ಸುಮಾರು 62 ಸಾವಿರ ರೂಪಾಯಿವರೆಗೆ ಏರಿಕೆಯಾಗಲಿದೆ. ಆಯಾ ಕಾರಿನ ಮಾದರಿ ಮೇಲೆ ಕಾರಿನ ಬೆಲೆ ಜಾಸ್ತಿಯಾಗುತ್ತಿದೆ.
ಯಾವ ಕಾರಿನ ಬೆಲೆ ಎಷ್ಟು ಏರಿಕೆ?
ಸಣ್ಣ ಎಸ್ ಯುವಿ ಫ್ರಾಂಕ್ಸ್- 2,500 ರೂಪಾಯಿ
ಎಂಟ್ರಿ ಸೆಡಾನ್ ಡಿಜೈರ್ ಟೂರ್ ಎಸ್- 3,000 ರೂಪಾಯಿ
ಎಂಪಿವಿಗಳಾದ ಎರ್ಟಿಗಾ ಮತ್ತು ಎಕ್ಸ್ ಎಲ್ 6- 12,500 ರೂಪಾಯಿ
ಸಣ್ಣ ಕಾರು ವ್ಯಾಗನ್R- 14,000 ರೂಪಾಯಿ
ಈಕೋ- 22,500 ರೂಪಾಯಿ
ಗ್ರ್ಯಾಂಡ್ ವಿಟಾರಾ – 62,000 ರೂಪಾಯಿ
2025ರ ಮೂರು ತಿಂಗಳ ಅವಧಿಯಲ್ಲೇ ಮಾರುತಿ ಸುಜುಕಿ ಕಂಪನಿಯು ಮೂರು ಬಾರಿ ಕಾರುಗಳ ಬೆಲೆ ಏರಿಕೆ ಮಾಡಿದಂತಾಗಲಿದೆ. ಜನವರಿಯಲ್ಲಿ ಕಾರುಗಳ ಬೆಲೆಯಲ್ಲಿ ಶೇ.4ರಷ್ಟು ಏರಿಕೆ ಮಾಡಿತು. ಇದಾದ ಒಂದೇ ತಿಂಗಳಲ್ಲಿ ಅಂದರೆ, ಫೆಬ್ರವರಿಯಲ್ಲೂ ಶೇ.1-4ರವರೆಗೆ ಬೆಲೆಯೇರಿಕೆ ಮಾಡಿದೆ. ಈಗ ಮೂರನೇ ಬಾರಿ ಬೆಲೆಯೇರಿಕೆ ಘೋಷಣೆ ಮಾಡಿದೆ.
ಉತ್ಪಾದನೆ, ಸಾಗಣೆ, ಕಾರ್ಯಾಚರಣೆ ವೆಚ್ಚಗಳಲ್ಲಿ ಏರಿಕೆಯಾದ ಕಾರಣ ಕಾರುಗಳ ಬೆಲೆ ಜಾಸ್ತಿಮಾಡಲಾಗುತ್ತಿದೆ ಎಂದು ಮಾರುತಿ ಸುಜುಕಿ ಕಂಪನಿ ತಿಳಿಸಿದೆ. ” ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಗ್ರಾಹಕರ ಮೇಲೆ ಬೀರುವ ಪರಿಣಾಮವನ್ನು ತಗ್ಗಿಸಲು ಕಂಪನಿಯು ಬದ್ಧವಾಗಿದೆ. ಆದರೂ, ಹೆಚ್ಚಿದ ವೆಚ್ಚದ ಸ್ವಲ್ಪ ಭಾಗವನ್ನು ಮಾರುಕಟ್ಟೆಗೆ ವರ್ಗಾಯಿಸಲು ಕಂಪನಿ ನಿರ್ಧರಿಸಿದೆ” ಹೇಳಿದೆ. ಈಗಾಗಲೇ ಹ್ಯುಂಡೈ, ಟಾಟಾ ಮೋಟರ್ಸ್, ಮಹೀಂದ್ರಾ ಕೂಡ ಕಾರುಗಳ ಬೆಲೆಯೇರಿಕೆ ಘೋಷಣೆ ಮಾಡಿವೆ.