ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟಿರುವ ಶೂಟರ್ ಮನು ಭಾಕರ್ ಮತ್ತೊಂದು ಪದಕ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದು ಕೊಟ್ಟ ಮನು ಭಾಕರ್ ಈಗ ಮಿಶ್ರ ತಂಡದ ಸ್ಪರ್ಧೆಯಲ್ಲಿಯೂ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಮಿಶ್ರ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದು, ಈ ಇಬ್ಬರೂ ಕಂಚಿನ ಪದಕಕ್ಕಾಗಿ ದಕ್ಷಿಣ ಕೊರಿಯಾದ ಶೂಟರ್ ಗಳನ್ನು ಎದುರಿಸಲಿದ್ದಾರೆ. ಈ ಪಂದ್ಯ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.
ಮನು ಭಾಕರ್ ಮತ್ತು ಸರಬ್ಜೋತ್ ಜೋಡಿ 580 ಅಂಕಗಳನ್ನು ಗಳಿಸಿದ್ದು, ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಸ್ಪರ್ಧೆಯಲ್ಲಿ ಟರ್ಕಿ ತಂಡ 582 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಸೆರ್ಬಿಯಾ ತಂಡ 581 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈಗ ಟರ್ಕಿ ಮತ್ತು ಸರ್ಬಿಯಾ ನಡುವೆ ಚಿನ್ನದ ಪದಕ್ಕಾಗಿ ಪೈಪೋಟಿ ನಡೆಯಲಿದೆ. ಗೆದ್ದ ತಂಡ ಚಿನ್ನ, ಸೋತ ತಂಡ ಬೆಳ್ಳಿ ಪದಕ ಪಡೆಯಲಿದೆ. ಕಂಚಿನ ಪದಕ್ಕಾಗಿ 580 ಅಂಕ ಸಂಪಾಧಿಸಿರುವ ಭಾರತ ಹಾಗೂ 579 ಅಂಕ ಸಂಪಾಧಿಸಿರುವ ಕೊರಿಯಾ ಮಧ್ಯೆ ಫೈಟ್ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಕಂಚಿನ ಪದಕ ಗೆಲ್ಲಲಿದೆ.
ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಕಂಚಿನ ಪದಕ ಗೆದ್ದಿದ್ದರು. ಈ ಪದಕದೊಂದಿಗೆ ಶೂಟಿಂಗ್ ನಲ್ಲಿ ಮೊದಲ ಗೆದ್ದ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದರು. ಈಗ ಮತ್ತೊಂದು ಕಂಚಿನ ಪದಕದ ನಿರೀಕ್ಷೆಯಲ್ಲಿ ಮನು ಭಾಕರ್ ಇದ್ದಾರೆ.