ಬೆಂಗಳೂರು/ನವ ದೆಹಲಿ : ಬೆಂಗಳೂರಿನಲ್ಲಿ ರಸ್ತೆ ಮೂಲಕ ಮನೆಗೆ ತಲುಪುವ ಹೊತ್ತಿಗೆ, ವಿಮಾನದ ಮೂಲಕ ಮುಂಬೈ-ದೆಹಲಿ ತಲುಪಬಹುದು ಎಂಬ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರ ಹೇಳಿಕೆ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಕಿಡಿಕಾರಿದ್ದಾರೆ.
ಮೂರನೇ ಹಂತದ ಮೆಟ್ರೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ಹಾಗೂ ಹಳದಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ನಡೆದ ಸಮಾರಂಭವನ್ನು ಉದ್ದೇಶಿಸಿ ಮನೋಹರ್ ಲಾಲ್ ಮಾತನಾಡುತ್ತಾ ಈ ಹೇಳಿಕೆಯನ್ನು ವ್ಯಂಗ್ಯವಾಗಿ ನುಡಿದಿದ್ದರು.
ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಸಾಕಷ್ಟು ಜೋಕ್ಸ್ ಗಳನ್ನು ಮಾಡಲಾಗುತ್ತದೆ. ಯಾರನ್ನಾದರೂ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿಸಿದರೆ, ಆ ವ್ಯಕ್ತಿ ಮನೆಗೆ ತಲುಪುವಷ್ಟರಲ್ಲಿ, ವಿಮಾನದ ಮೂಲಕ ದೆಹಲಿ ಅಥವಾ ಮುಂಬೈಗೆ ತಲುಪಬಹುದು ಎಂದು ತಮಾಷೆಯಾಗಿ ಹೇಳುತ್ತಾರೆ. ಪ್ರಧಾನಿಯವರ ನೇತೃತ್ವದಲ್ಲಿ ನಾವು ಇದನ್ನು ಸವಾಲನ್ನು ಸ್ವೀಕರಿಸಿದ್ದು, ಸಮಸ್ಯೆಯನ್ನು ದೂರಾಗಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ, ಬೆಂಗಳೂರು ದೆಹಲಿಯ ನಂತರ ಎರಡನೇ ಅತ್ಯುತ್ತಮ ಮೆಟ್ರೋ ಜಾಲವನ್ನು ಹೊಂದಿರುವ ನಗರವಾಗಲಿದೆ ಎಂದು ಹೇಳಿದ್ದರು.
ಮನೋಹರ್ ಲಾಲ್ ಖಟ್ಟರ್ ಅವರ ಈ ಹೇಳಿಕೆಯನ್ನು ಆರ್‌ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರವಾಗಿ ಖಂಡಿಸಿದ್ದಾರೆ.
“ಖಂಡಿತವಾಗಿಯೂ ಹೌದು, ಬೆಂಗಳೂರಿಗೆ ಜನರ ಹರಿವು ಹೆಚ್ಚಾಗಿದೆ. ಯೋಗ್ಯವಾದದ್ದನ್ನು ನಿರ್ಮಿಸಿರುವುದಕ್ಕೆ ಬೆಂಗಳೂರಿನಲ್ಲಿ ಜನರ ಹಲವು ಹೆಚ್ಚಾಗಿದೆ. ಈ ರೀತಿಯಲ್ಲಿ ನಮ್ಮನ್ನು ಹಾಸ್ಯ ಮಾಡುವ ಬದಲು ಕೇಂದ್ರ ಸರ್ಕಾರ ನಮಗೆ ನಮ್ಮ ನ್ಯಾಯಯುತ ಅನುದಾನವನ್ನು ನೀಡಬೇಕು ಎಂದು ಹೇಳಿದ್ದಾರೆ. ಕರ್ನಾಟಕ ಕೇಂದ್ರಕ್ಕೆ 4.5 ಲಕ್ಷ ಕೋಟಿ ರೂ.ಗಳ ಕೊಡುಗೆಯನ್ನು ನೀಡುತ್ತದೆ. ಆದರೆ, ನೀವು ನಮಗೆ ಮರಳಿ ಏನನ್ನು ನೀಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಕೇಂದ್ರದ ವಿರುದ್ಧ ಖರ್ಗೆ ಕಿಡಿಕಾರಿದ್ದಾರೆ.
ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ. 87.37ರಷ್ಟು ಹಣ ನೀಡುತ್ತಿದ್ದು, ಕೇಂದ್ರ ಸರ್ಕಾರದ ಪಾಲು ಕೇವಲ ಶೇ.12.63 ರಷ್ಟಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವವೂ ಸಹ ಬೆಂಗಳೂರು ಮೆಟ್ರೋ ಯೋಜನೆಯ ಅನುಷ್ಠಾನಕ್ಕೆ ಕಾರಣವಾಗಿದೆ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಹಣಕಾಸು ಮತ್ತು ತಾಂತ್ರಿಕ ನೆರವು ಒದಗಿಸುತ್ತಿದೆ.
ರಾಜ್ಯ ಸರ್ಕಾರ ಮೆಟ್ರೋ ಯೋಜನೆ ಹಂತ 1,2 ಮತ್ತು 2ಎ, 2ಬಿ ಮತ್ತು ಹಂತ 3 ಅನುಷ್ಠಾನಕ್ಕೆ ತನ್ನ ಪಾಲಿನ ರೂ. 25,387 ಕೋಟಿ ಒದಗಿಸಿದ್ದು, ಇದರೊಂದಿಗೆ ಹೆಚ್ಚುವರಿ ಹಣಕಾಸು ನೆರವಿನ ರೂಪದಲ್ಲಿ ಸಾಲ ಮರುಪಾವತಿಗಾಗಿ ರೂ.3,987 ಕೋಟಿ ಒದಗಿಸಿದೆ. ಮೆಟ್ರೋ ಯೋಜನೆಗಳಿಗಾಗಿ ಇದುವರೆಗೂ 59,139 ಕೋಟಿ ರೂ ಅನುದಾನವನ್ನು ವಿನಿಯೋಗಿಸಲಾಗಿದೆ. ರಾಜ್ಯ ಸರ್ಕಾರದ ಜವಾಬ್ಧಾರಿ ಶೇ. 87.37 ರಷ್ಟಿದೆ. ಕೇಂದ್ರ ಸರ್ಕಾರವು ತನ್ನ ಖಜಾನೆಯಿಂದ ಕೊಟ್ಟಿರುವುದು ಶೇ. 12.63 ರಷ್ಟು. ಕೇಂದ್ರ ಸರ್ಕಾರ ಒದಗಿಸಿರುವುದು 7,468.86 ಕೋಟಿ ರೂ.ಗಳು ಮಾತ್ರ.
ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾಗಳು ಶೇ.50;50 ಅನುಪಾತದಲ್ಲಿ ಹೂಡಿಕೆ ಮಾಡಬೇಕೆಂದು ಒಪ್ಪಂದವಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಈಕ್ವಿಟಿಯ ಹೊರತಾಗಿ ಸಾಲದ ರೂಪದಲ್ಲಿ ಬಂದ ಹಣವನ್ನು ಬಡ್ಡಿ ಸಮೇತ ರಾಜ್ಯ ಸಕಾರ ಹಾಗೂ ಮೆಟ್ರೋ ಸಂಸ್ಥೆಗಳು ತೀರಿಸಬೇಕಾಗಿದೆ. ಇದರಿಂದ ರಾಜ್ಯದ ಮೇಲೆ, ನಮ್ಮ ಮೇಲೆ ಶೇ.87.37 ರಷ್ಟು ಭಾರವಿದೆ ಎಂದು ಹೇಳಿದ್ದಾರೆ.



















