ಭಾರತದ ಮೊದಲ ಸ್ವಾತಂತ್ರ್ಯ ಯೋಧ, ಮಹಾನ್ ಯೋಧ ಎಂದು ಮಂಗಲ್ ಪಾಂಡೆ ಶಾಶ್ವತವಾಗಿ ಜನಮಾನಸದಲ್ಲಿ ಉಳಿದು ಬಿಟ್ಟಿದ್ದಾರೆ. ಬಹುಶಃ ಸ್ವತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಮಂಗಲ್ ಪಾಂಡೆ ಹಾಕಿಕೊಟ್ಟ ಬುನಾದಿ, ಸ್ಪೂರ್ತಿ, ಹೋರಾಟದ ಆದಿ ಹಾಗೂ ಹಾದಿಯನ್ನು ನೆನಪಿಸಿಕೊಳ್ಳದೇ ಹೋದರೆ ತಪ್ಪಾದೀತು.

ಭಾರತೀಯ ಸ್ವಾತಂತ್ರ್ಯಯೋಧರಲ್ಲಿ ಚಿರಸ್ಮರಣೀಯಾವಾಗಿ ಮಂಗಲ್ ಪಾಂಡೆ ನಿಂತಿದ್ದಾರೆ. ಅವರು ಅಂದು ಕೆಚ್ಚದೆ ತೋರಿಸಿದ ಪರಿ ಇಡೀ ಭಾರತವನ್ನು ಇಂದು ಸ್ವಾತಂತ್ರ್ಯವಾಗಿ ಮಾಡಿದೆ. ಅವರು ಹಾಕಿಕೊಟ್ಟ ಆ ಕಿಚ್ಚು ಇಂದು ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತ ಕೈ ಬೀಸಿ ನಡೆಯುವಂತೆ ಮಾಡಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ, ನಾಗವ ಹಳ್ಳಿಯ ಬಡ ಕುಟುಂಬವೊಂದರಲ್ಲಿ 1827ರ ಜುಲೈ 19ರಂದು ಜನಿಸಿದ ಮಂಗಲ್ ಪಾಂಡೆ ಅಪ್ಪಟ ದೇಶ ಸೇವಕ. ಕೃಷಿಯನ್ನವಲಂಬಿಸಿದ್ದ ಅವರ ತಂದೆ ದಿವಾಕರ್ ಪಾಂಡೆಯವರು, ಮಂಗಲ್ ಪಾಂಡೆ ಇನ್ನೂ ಮೂರು ವರ್ಷದ ಮಗುವಾಗಿದ್ದಾಗಲೇ ಬರಗಾಲದಿಂದಾಗಿ ಸಾವನ್ನಪ್ಪಿದ್ದರು. ಹುಟ್ಟುತ್ತಲೇ ಕಷ್ಟ ನೋಡಿದ್ದ ಪಾಂಡೆಗೆ ಬ್ರಿಟಿಷರು ಕೊಟ್ಟಿದ್ದ ಕಷ್ಟಗಳು ದೊಡ್ಡದೇನು ಅನಿಸಿರಲಿಲ್ಲ. ಹುಟ್ಟಿದ ದಿನದಿಂದಲೂ ಕಷ್ಟಪಟ್ಟು ಬೆಳೆದ ಮಂಗಲ್ ಪಾಂಡೆ 1849ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಸೇವೆಗೆ ಸೇರಿದ್ದರು. ಆದರೆ, ಅಂದು ಕೆಂಪು ಮೋತಿಗಳು ಸೇನೆಯಲ್ಲಿದ್ದ ಭಾರತೀಯ ಸಿಪಾಯಿಗಳನ್ನು ಅಗೌರವದಿಂದ ಕಾಣುತ್ತಿದ್ದವು. ಬ್ರಿಟಿಷ್ ಸಿಪಾಯಿಗಳಿಗೆ ಹೋಲಿಸಿದರೆ ಭಾರತೀಯ ಸಿಪಾಯಿಗಳಿಗೆ ಸಿಗುತ್ತಿದ್ದ ಸಂಬಳವೂ ಕಡಿಮೆ. ಯುದ್ಧಗಳಲ್ಲಿ ಹೋರಾಡಲು ಭಾರತದಿಂದ ಬೇರೆ ಕಡೆಗೂ ಹೋಗಬೇಕಿತ್ತು. ಹಣೆಗೆ ತಿಲಕ ಇಟ್ಟುಕೊಳ್ಳುವುದು, ಗಡ್ಡ-ಮೀಸೆ ಬೆಳೆಸುವುದು ನಿಷೇಧವಾಗಿತ್ತು. ಭಾರತೀಯ ಪರಂಪರೆ, ಸಂಸ್ಕೃತಿಯನ್ನೇ ಅವರು ಹೀಯಾಳಿಸಿ, ಹೀನ ಮಾಡಿ ಬಿಟ್ಟಿದ್ದರು.

ದೇವನಾಗರಿ ಉರ್ದು ಲಿಪಿಗಳಲ್ಲಿ ಕ್ರೈಸ್ತ ಧರ್ಮ ಬೋಧನೆಗಳನ್ನು ಹಂಚಿ ಭಾರತೀಯ ಮನೋಧರ್ಮಗಳನ್ನು ಖಂಡಿಸುವ ಪ್ರಯತ್ನಗಳು ಎಡಬಿಡದೆ ನಡೆದಿದ್ದವು. ಇದೆಲ್ಲವನ್ನೂ ಮೀರಿದ್ದು ಎಂಬಂತೆ ಸಿಪಾಯಿಗಳಿಗೆ ಕೊಟ್ಟ ಹೊಸ ಬಂದೂಕುಗಳಿಗೆ ತುಪಾಕಿ ಹಾಕುವ ಮೊದಲು ಅವನ್ನು ಬಾಯಿಯಿಂದ ಕಚ್ಚಿ ಮೇಲಿನ ಕವಚ ಕೀಳಬೇಕಿತ್ತು. ಆ ತುಪಾಕಿಗಳಿಗೆ ಹಸು ಮತ್ತು ಹಂದಿಗಳ ದೇಹದ ಕೊಬ್ಬನ್ನು ಸವರಿದ್ದರೆಂಬ ಸುದ್ದಿ ಕೂಡ ಆಗ ಹರಿದಾಡಿತ್ತು. ಇದರಿಂದ ಭಾರತದ ಸಿಪಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿ ಅವರೆಲ್ಲ ದಂಗೆ ಎದ್ದಿದ್ದರು. ಈ ದಂಗೆಯ ಮೊದಲ ಕೆಚ್ಚೆದೆಯ ಬಂಟನೇ ನಮ್ಮ ಮಂಗಲ್ ಪಾಂಡೆ.

1857ರ ಮಾರ್ಚ್ 29ರಂದು ಬಂಗಾಲ ಪ್ರಾಂತ್ಯದ ಬಾರಕ್‌ಪುರ ಕಂಟೋನ್ಮೆಂಟ್‌ನ ಮಂಗಲ್ ಪಾಂಡೆ ಬ್ರಿಟಿಷ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದರು. ಆ ನಂತರದಲ್ಲಿ ಬ್ರಿಟಿಷರಿಗೆ ತಲೆಬಾಗಬಾರದೆಂಬ ಉದ್ದೇಶದಿಂದ ತಮ್ಮನ್ನೂ ಕೊಂದುಕೊಳ್ಳಲು ಯತ್ನಿಸಿದ ಅವರ ಪ್ರಯತ್ನ ವಿಫಲಗೊಂಡಿತು. ನಂತರದಲ್ಲಿ ಬ್ರಿಟಿಷರು ಅವರನ್ನು ಗಲ್ಲಿಗೇರಿಸಿದರು. ಈ ಘಟನೆಯೇ ದಂಗೆಗೆ ದೊಡ್ಡ ಶಕ್ತಿಯಾಗಿ ಮಾರ್ಪಟ್ಟಿತು. ಮಂಗಲ್ ಪಾಂಡೆ ಒಬ್ಬರಲ್ಲೇ ಅಂದು ಬಡಿದೆದ್ದಿದ್ದ ದೇಶ ಪ್ರೇಮದ ಕಿಚ್ಚು ದೊಡ್ಡ ಕಾಡ್ಗಿಚ್ಚಿನಿಂದ ಹಬ್ಬಿ. ಬ್ರಿಟಿಷರನ್ನು ದೇಶದಿಂದಲೇ ಆಚೆ ಒದ್ದು ಹಾಕುವಂತೆ ಮಾಡಿತು. ಅವರನ್ನು ಗಲ್ಲಿಗೇರಿಸಲಾಯಿತಾದರೂ ಅವರು ಮಾಡಿದ ಈ ಹೋರಾಟ ಭಾರತೀಯ ಮನೆ ಮನಗಳಲ್ಲಿ ಇಂದಿಗೂ ಕಾವು ನೀಡುತ್ತಲೇ ಇವೆ.

ಮಂಗಲ್ ಪಾಂಡೆಯ ಆ ಧೈರ್ಯ ಯುದ್ಧದ ಕಿಡಿಗೆ ದೊಡ್ಡ ಇಂಬು ನೀಡಿತು. ಆನಂತರ ಯುದ್ಧ1857ರ ಮೇ 10ರಂದು ಮೀರತ್‌ನಲ್ಲಿ ಬಂಗಾಲ ತುಕಡಿ ಕಾರ್ಯನಿರ್ವಹಿಸುತ್ತಿತ್ತು. ಆ ತುಕಡಿ ಬ್ರಿಟಿಷ್ ಅಧಿಕಾರಿಗಳ ಆದೇಶವನ್ನು ಸಾಮೂಹಿಕವಾಗಿ ಧಿಕ್ಕರಿಸಿ ಎಲ್ಲರೂ ದೆಹಲಿಯಲ್ಲಿ ಕವಾಯತು ಹೊರಟಿತು. ನಾನಾಸಾಹೇಬ್ ಪೇಶ್ವೆ, ತಾತ್ಯಾ ಟೋಪೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅವಧ್‌ನ ಬೇಗಂ ಹಜ್ರತ್ ಮಹಲ್, ಬಿಹಾರದ ಕುನ್ವರ್‌ಸಿಂಗ್, ಮೌಲ್ವಿ ಅಹಮದುಲ್ಲಾ ಇವರೆಲ್ಲರೂ ವಿವಿಧ ಪ್ರಾಂತ್ಯಗಳಲ್ಲಿ ದಂಗೆಯ ನೇತೃತ್ವ ವಹಿಸಿಕೊಂಡಿದ್ದರು.

ನಂತರ ಅದು ಉತ್ತರ ಪ್ರದೇಶದ ಹಳ್ಳಿ ಹಳ್ಳಿಗೂ ವ್ಯಾಪಿಸಿ, ದೇಶದುದ್ದಗಲಕ್ಕೂ ಹರಡಲು ಆರಂಭವಾಯಿತು. ಬಂಗಾಲದಿಂದ ಬಿಹಾರ, ಒರಿಸ್ಸಾಗೂ ಸಮರದ ಜ್ವಾಲೆಗಳು ಹರಡಲು ಆರಂಭಿಸಿದವು. ಔರಂಗಾಬಾದ್, ಕೊಲ್ಹಾಪುರ, ಸತಾರಾ ಹಾಗೂ ನಾಗ್ಪುರಗಳಲ್ಲೂ ಸಿಪಾಯಿಗಳು ದಂಗೆ ಎದ್ದರು. ಪರಿಣಾಮ ಕುನ್ವರ್‌ಸಿಂಗ್, ಮೌಲ್ವಿ ಅಹಮದುಲ್ಲಾ ಹಾಗೂ ರಾಣಿ ಲಕ್ಷ್ಮೀಬಾಯಿ ತಮ್ಮ ಜೀವವನ್ನೇ ಅರ್ಪಿಸಿದರು. ಹೀಗಾಗಿ ಇಂದು ಈ ಮಹಾನ್ ಹೋರಾಟಗಾರನನ್ನು ಇಡೀ ಭಾರತ ನೆನಪಿಸಿಕೊಳ್ಳಲೇಬೇಕು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚು ನೀಡಿದ ಮಂಗಲ್ ಪಾಂಡೆ ಇಂದಿಗಷ್ಟೇ ಅಲ್ಲ, ಎಂದೆಂದಿಗೂ ಭಾರತೀಯರಲ್ಲಿ ಚಿರಸ್ಮರಣೀಯವಾಗಿ ಉಳಿಯಲಿ.



















