ನಾಂದೇಡ್ (ಮಹಾರಾಷ್ಟ್ರ): ಏಳು ತಿಂಗಳ ಹಿಂದಷ್ಟೇ ಮಗಳ ಪ್ರಿಯಕರನೊಂದಿಗೆ ಸಂತೋಷದಿಂದ ಹೆಜ್ಜೆ ಹಾಕಿದ್ದ ತಂದೆ, ಈಗ ಅದೇ ಯುವಕನ ಬರ್ಬರ ಹತ್ಯೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಪ್ರೀತಿ ಮತ್ತು ಜಾತಿ ಸಂಘರ್ಷದ ನಡುವೆ ನಡೆದ ಈ ಘೋರ ಕೃತ್ಯ ಮಹಾರಾಷ್ಟ್ರದ ನಾಂದೇಡ್ ಅನ್ನು ಬೆಚ್ಚಿ ಬೀಳಿಸಿದೆ.
ನಂಬಿಸಿ ಕತ್ತು ಸೀಳಿದ ಕುಟುಂಬ?
ಕೊಲೆಗೀಡಾದ ಯುವಕ ಸಕ್ಷಮ್ ಟಾಟೆ (20) ಮತ್ತು ಆಂಚಲ್ ಮಮಿಡ್ವಾರ್ (21) ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಏಪ್ರಿಲ್ 14 ರಂದು ನಡೆದ ಅಂಬೇಡ್ಕರ್ ಜಯಂತಿಯ ಆಚರಣೆಯ ವೇಳೆ ಆಂಚಲ್ ತಂದೆ ಗಜಾನನ್ ಮಮಿಡ್ವಾರ್ ಅವರು ಮಗಳು ಮತ್ತು ಆಕೆಯ ಪ್ರಿಯಕರ ಸಕ್ಷಮ್ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

“ನನ್ನ ಕುಟುಂಬದವರು ಸಕ್ಷಮ್ ಜೊತೆ ಊಟ ಮಾಡುತ್ತಾ, ಚೆನ್ನಾಗಿ ಮಾತನಾಡುತ್ತಾ ಎಲ್ಲವೂ ಸರಿಯಿದೆ ಎಂದು ನಂಬಿಸಿದ್ದರು. ಆದರೆ ಅದೆಲ್ಲಾ ನಾಟಕವಾಗಿತ್ತು ಎಂದು ನಮಗೆ ತಿಳಿದಿರಲಿಲ್ಲ,” ಎಂದು ಆಂಚಲ್ ಕಣ್ಣೀರು ಹಾಕಿದ್ದಾರೆ. ಗುರುವಾರ ಸಕ್ಷಮ್ ಅವರನ್ನು ಗುಂಡಿಕ್ಕಿ, ಟೈಲ್ಸ್‌ನಿಂದ ತಲೆಯನ್ನು ಜಜ್ಜಿ ಕೊಲ್ಲಲಾಗಿದೆ.
ಶವದೊಂದಿಗೆ ಮದುವೆಯಾದ ಯುವತಿ
ತನ್ನ ಪ್ರಿಯಕರನ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ಆಂಚಲ್, ಸ್ಮಶಾನದಲ್ಲಿ ಸಕ್ಷಮ್ ಅವರ ಮೃತದೇಹದೊಂದಿಗೆ ಸಾಂಕೇತಿಕವಾಗಿ ‘ವಿವಾಹ’ವಾಗುವ ಮೂಲಕ ಮನಕಲಕುವ ದೃಶ್ಯಕ್ಕೆ ಸಾಕ್ಷಿಯಾದರು. ಅವರು ತಮ್ಮ ಕುಟುಂಬವನ್ನು ಸಂಪೂರ್ಣವಾಗಿ ತ್ಯಜಿಸಿದ್ದು, ಪ್ರಿಯಕರನ ಕುಟುಂಬದೊಂದಿಗೆ ವಾಸಿಸಲು ನಿರ್ಧರಿಸಿದ್ದಾರೆ. ಅಲ್ಲದೆ, ಹತ್ಯೆಗೈದ ತನ್ನ ತಂದೆ ಮತ್ತು ಸಹೋದರನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಜಾತಿ ಸಂಘರ್ಷ ಮತ್ತು ಪೊಲೀಸ್ ಪ್ರೇರೇಪಣೆ ಆರೋಪ
ಸಕ್ಷಮ್ ದಲಿತ ಸಮುದಾಯಕ್ಕೆ ಸೇರಿದ್ದರೆ, ಆಂಚಲ್ ವಿಶೇಷ ಹಿಂದುಳಿದ ವರ್ಗಕ್ಕೆ (SBC) ಸೇರಿದವರು. ಈ ಪ್ರಕರಣದಲ್ಲಿ ಪೊಲೀಸರ ಪಾತ್ರದ ಬಗ್ಗೆಯೂ ಆಂಚಲ್ ಗಂಭೀರ ಆರೋಪ ಮಾಡಿದ್ದಾರೆ. “ಠಾಣೆಗೆ ಹೋದಾಗ ಇಬ್ಬರು ಪೊಲೀಸ್ ಅಧಿಕಾರಿಗಳೇ ನನ್ನ ಸಹೋದರನಿಗೆ ಪ್ರಚೋದನೆ ನೀಡಿದರು. ಜಗಳವಾಡುವ ಬದಲು ಆತನನ್ನು ಕೊಂದುಬಿಡು ಎಂದು ಉದ್ರೇಕಕಾರಿ ಮಾತುಗಳನ್ನು ಆಡಿದ್ದರಿಂದಲೇ ನನ್ನ ತಮ್ಮ ಈ ಕೃತ್ಯ ಎಸಗಿದ,” ಎಂದು ಆಂಚಲ್ ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಂಚಲ್ ಅವರ ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಪೊಲೀಸರು ಆರೋಪಿಗಳನ್ನಾಗಿ ಹೆಸರಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾದ ಆಂಚಲ್ ಅವರ ಅಪ್ರಾಪ್ತ ಸಹೋದರನ ಮೇಲೂ ಕ್ರಮ ಜರುಗಿಸಲಾಗುತ್ತಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ‘ಕಾಂತಾರ’ ದೃಶ್ಯ ಅನುಕರಣೆ | ವಿವಾದದ ಬಳಿಕ ಬೇಷರತ್ ಕ್ಷಮೆ ಕೋರಿದ ರಣವೀರ್ ಸಿಂಗ್!


















