ಅಮರಾವತಿ: ಆಂಧ್ರಪ್ರದೇಶದ ಪ್ರಸಿದ್ಧ ಶ್ರೀಶೈಲಂ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಜಿರಳೆ ಸಿಕ್ಕಿರುವುದಾಗಿ ಭಕ್ತರೊಬ್ಬರು ಆರೋಪಿಸಿದ್ದು, ಈ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಶರಶ್ಚಂದ್ರ ಕೆ. ಎಂಬ ವ್ಯಕ್ತಿಯು ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಲಡ್ಡುವಿನ ಮಧ್ಯೆ ಸತ್ತಿರುವ ಜಿರಳೆಯೊಂದು ವಿಡಿಯೋದಲ್ಲಿ ಕಾಣಿಸಿದೆ.
ಶರಶ್ಚಂದ್ರ ಅವರು ಕೂಡಲೇ ದೇವಾಲಯದ ಕಾರ್ಯಕಾರಿ ಅಧಿಕಾರಿಗೆ ಈ ಕುರಿತು ದೂರು ನೀಡಿದ್ದಾರೆ. ಬಹಳ ನಿರ್ಲಕ್ಷ್ಯಯುತ ಸಿಬ್ಬಂದಿ ಈ ಲಡ್ಡು ತಯಾರಿಸಿರಬಹುದು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
“ಜೂನ್ 29ರಂದು ನಾನು ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಸ್ವೀಕರಿಸಿದ ಲಡ್ಡು ಪ್ರಸಾದ ತಿನ್ನುವ ವೇಳೆ ಅದರೊಳಗೆ ನನಗೆ ಜಿರಳೆಯೊಂದು ಸಿಕ್ಕಿದೆ. ದೇವಸ್ಥಾನದ ಸಿಬ್ಬಂದಿಯು ಪ್ರಸಾದ ತಯಾರಿಸುವಾಗ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಈ ಬಗ್ಗೆ ಗಮನ ಹರಿಸಿ, ಸಮಸ್ಯೆ ಪರಿಹರಿಸಿ” ಎಂದು ಶರಶ್ಚಂದ್ರ ಹೇಳಿದ್ದಾರೆ.
ಆರೋಪ ನಿರಾಕರಿಸಿದ ದೇಗುಲ ಅಧಿಕಾರಿಗಳು:
ಇದೇ ವೇಳೆ ದೇಗುಲದ ಅಧಿಕಾರಿಗಳು ಶರಶ್ಚಂದ್ರ ಅವರ ಆರೋಪಗಳನ್ನು ಅಲ್ಲಗಳೆದಿದ್ದಾರೆ. ನಾವು ಅತ್ಯಂತ ಸ್ವಚ್ಛ ಹಾಗೂ ನೈರ್ಮಲ್ಯಯುತ ಪ್ರದೇಶದಲ್ಲೇ ಲಡ್ಡು ಪ್ರಸಾದವನ್ನು ತಯಾರಿಸುತ್ತೇವೆ. ಸಿದ್ಧತಾ ಕೇಂದ್ರದಲ್ಲಿ ನಿರಂತರ ಮೇಲ್ವಿಚಾರಣೆಯೊಂದಿಗೆ ಲಡ್ಡು ತಯಾರಿಕೆ ಪ್ರಕ್ರಿಯೆ ನಡೆಯುತ್ತದೆ. ಅದರಲ್ಲಿ ಜಿರಳೆ ಸಿಗಲು ಸಾಧ್ಯವೇ ಇಲ್ಲ ಎಂದು ಶ್ರೀಶೈಲಂ ದೇವಸ್ಥಾನಂ ಕಾರ್ಯಕಾರಿ ಅಧಿಕಾರಿ ಶ್ರೀನಿವಾಸ ರಾವ್ ಹೇಳಿದ್ದಾರೆ. ಜೊತೆಗೆ, ಪ್ರಸಾದದ ಕುರಿತು ಕಳವಳ ಬೇಡ ಎಂದು ಭಕ್ತಾದಿಗಳಿಗೆ ಅವರು ಮನವಿ ಮಾಡಿದ್ದಾರೆ.
 
                                 
			 
			
 
                                 
                                


















